×
Ad

ಪಂಜಾಬ್‍ನಲ್ಲಿನ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ: ಕೆನಡಾ ವಿದೇಶಾಂಗ ಸಚಿವೆ

Update: 2023-03-25 22:53 IST

ಒಟ್ಟಾವ, ಮಾ.25: ಖಾಲಿಸ್ತಾನಿ ಮುಖಂಡ ಅಮೃತ್‍ಪಾಲ್ ಸಿಂಗ್ ಶೋಧ ಕಾರ್ಯಾಚರಣೆ ಮುಂದುವರಿದಿರುವಂತೆಯೇ, ಪಂಜಾಬ್‍ನಲ್ಲಿನ ಬೆಳವಣಿಗೆಯನ್ನು ಕೆನಡಾ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಪಂಜಾಬ್‍ನಲ್ಲಿನ ಪರಿಸ್ಥಿತಿಯ ಬಗ್ಗೆ ನಮಗೆ ಅರಿವಿದೆ ಮತ್ತು ಇದನ್ನು ಅತ್ಯಂತ ನಿಕಟವಾಗಿ ಗಮನಿಸುತ್ತಿದ್ದೇವೆ. ಹೆಚ್ಚಿನ ಸ್ಥಿರ ಪರಿಸ್ಥಿತಿಗೆ ಮರಳುವುದನ್ನು ನಾವು ಎದುರು ನೋಡುತ್ತಿದ್ದೇವೆ. ಕೆನಡಾ ಸರಕಾರ ಯಾವಾಗಲೂ ಸಮುದಾಯದ ಹಲವು ಸದಸ್ಯರ ಕಳವಳದ ಬಗ್ಗೆ ಗಮನ ನೀಡುತ್ತದೆ ಎಂಬ ಬಗ್ಗೆ ಕೆನಡಾದ ಪ್ರಜೆಗಳು ವಿಶ್ವಾಸ ಇರಿಸಬಹುದು ಎಂದವರು ಹೇಳಿದ್ದಾರೆ.

ಪಂಜಾಬ್‍ನಲ್ಲಿ ಇಂಟರ್‍ನೆಟ್ ಸೇವೆ ಕಡಿತಗೊಳಿಸಿರುವ ವರದಿಯ ಬಗ್ಗೆ ಹಾಗೂ ಭಾರತದಲ್ಲಿನ ಪರಿಸ್ಥಿತಿ ಬಗ್ಗೆ ಸಂಸತ್ತಿಗೆ ಮಾಹಿತಿ ನೀಡಬೇಕೆಂದು  ಭಾರತೀಯ-ಕೆನಡಿಯನ್ ಸಂಸದ ಇಖ್ವಿಂದರ್ ಎಸ್ ಗಹೀರ್ ಕೇಳಿದ ಪ್ರಶ್ನೆಗೆ ಸಚಿವೆ ಉತ್ತರಿಸುತ್ತಿದ್ದರು. ಅಮೃತ್‍ಪಾಲ್ ಸಿಂಗ್‍ನ ನಿಕಟವರ್ತಿಯನ್ನು ಅಮೃತಸರ ಪೊಲೀಸರು ಬಂಧಿಸಿದ ಹಿನ್ನೆಲೆಯಲ್ಲಿ ಫೆಬ್ರವರಿ 23ರಂದು ಸಿಂಗ್‍ನ ಬೆಂಬಲಿಗರು  ಅಮೃತಸರ ಪೊಲೀಸ್ ಠಾಣೆಗೆ ದಾಳಿ ನಡೆಸಿದ್ದರು. ಬಳಿಕ ಅಮೃತ್‍ಪಾಲ್ ಸಿಂಗ್‍ನ ಬಂಧನಕ್ಕೆ ಪೊಲೀಸರು  ನಡೆಸುತ್ತಿರುವ ಕಾರ್ಯಾಚರಣೆಗೆ ಪೂರಕವಾಗಿ ಮಾರ್ಚ್ 18ರಂದು ಪಂಜಾಬ್‍ನಲ್ಲಿ ಇಂಟರ್‍ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

ಈ ಮಧ್ಯೆ, ವಿದೇಶದಲ್ಲಿ ನೆಲೆಸಿರುವ ಪ್ರಜೆಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ತಪ್ಪು ಮತ್ತು ಪ್ರೇರಿತ ನಿರೂಪಣೆಗಳನ್ನು ನಂಬಬಾರದು ಎಂದು ಭಾರತದ ವಿದೇಶಾಂಗ ಇಲಾಖೆಯ ವಕ್ತಾರ ಅರೀಂದಮ್ ಬಾಗ್ಚಿ ಆಗ್ರಹಿಸಿದ್ದಾರೆ. ಪಂಜಾಬ್‍ನಲ್ಲಿ ಅಧಿಕಾರಿಗಳು ತಲೆಮರೆಸಿಕೊಂಡ ವ್ಯಕ್ತಿಯನ್ನು  ಸೆರೆಹಿಡಿಯುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಕಾರ್ಯಾಚರಣೆಗೆ ಸಂಬಂಧಿಸಿದ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳು ನಿಯಮಿತವಾಗಿ ಹಂಚಿಕೊಳ್ಳುತ್ತಾರೆ ಎಂದವರು ಹೇಳಿದ್ದಾರೆ.

Similar News