ಅಮೆರಿಕ: ಭಾರತೀಯ ಪತ್ರಕರ್ತನ ಮೇಲೆ ರಾಯಭಾರ ಕಚೇರಿಯ ಹೊರಗೆ ಖಾಲಿಸ್ತಾನ್ ಬೆಂಬಲಿಗರಿಂದ ಹಲ್ಲೆ

ಘಟನೆ ಖಂಡಿಸಿದ ಭಾರತೀಯ ರಾಯಭಾರಿ ಕಚೇರಿ

Update: 2023-03-26 04:47 GMT

ವಾಷಿಂಗ್ಟನ್: ವಾಷಿಂಗ್ಟನ್ ಮೂಲದ ಭಾರತೀಯ ಪತ್ರಕರ್ತ ಲಲಿತ್ ಝಾ ಅವರು ಶನಿವಾರ ಮಧ್ಯಾಹ್ನ  ಭಾರತೀಯ ರಾಯಭಾರಿ ಕಚೇರಿಯ ಹೊರಗೆ ಖಾಲಿಸ್ತಾನ್ ಪರ ಪ್ರತಿಭಟನೆಯ ಕುರಿತು  ವರದಿ ಮಾಡುತ್ತಿದ್ದಾಗ  ವಾಷಿಂಗ್ಟನ್‌ನಲ್ಲಿ ಖಾಲಿಸ್ತಾನ್ ಬೆಂಬಲಿಗರು ದೈಹಿಕ ಹಲ್ಲೆ ನಡೆಸಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಘಟನೆಯನ್ನು ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಖಂಡಿಸಿದೆ.

ತನ್ನನ್ನು ರಕ್ಷಿಸಿ, ತನ್ನ ಕೆಲಸವನ್ನು ಮಾಡಲು ಸಹಾಯ ಮಾಡಿದ್ದಕ್ಕಾಗಿ ಅಮೆರಿಕದ ಸೀಕ್ರೆಟ್ ಸರ್ವಿಸ್ ಗೆ ರವಿವಾರ ಲಲಿತ್ ಝಾ ಧನ್ಯವಾದ ಅರ್ಪಿಸಿದರು.

ಖಾಲಿಸ್ತಾನ್ ಬೆಂಬಲಿಗರು ತನ್ನ ಎಡ ಕಿವಿಗೆ ಎರಡು ಕೋಲುಗಳಿಂದ ಹೊಡೆದಿದ್ದಾರೆ ಎಂದು ಹೇಳಿರುವ ಲಲಿತ್,  ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಖಾಲಿಸ್ತಾನ್ ಬೆಂಬಲಿಗರ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ.

“ಒಂದು ಹಂತದಲ್ಲಿ ನಾನು 911 ಗೆ ಕರೆ ಮಾಡುವಷ್ಟು ಬೆದರಿಕೆಯನ್ನು ಅನುಭವಿಸಿದೆ. ನಂತರ ನಾನು ಸೀಕ್ರೆಟ್ ಸರ್ವಿಸ್ ಅಧಿಕಾರಿಗಳನ್ನು ಗುರುತಿಸಿ ಅವರಿಗೆ ಘಟನೆಯನ್ನು ವಿವರಿಸಿದೆ" ಎಂದು  ಝಾ ANI ಗೆ ತಿಳಿಸಿದರು.

ಆದರೆ, ತನಗೆ ಹಲ್ಲೆ ಮಾಡಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರಲು  ಪತ್ರಕರ್ತ ನಿರ್ಧರಿಸಿದ್ದಾರೆ.

"ಅಮೃತಪಾಲ್ (ಸಿಂಗ್) ಅವರನ್ನು ಬೆಂಬಲಿಸಿ ಖಾಲಿಸ್ತಾನ್ ಪರ ಪ್ರತಿಭಟನಾಕಾರರು ಖಾಲಿಸ್ತಾನ್ ಧ್ವಜಗಳನ್ನು ಬೀಸಿದರು ಮತ್ತು ಯುಎಸ್ ಸೀಕ್ರೆಟ್ ಸರ್ವಿಸ್  ಸಮ್ಮುಖದಲ್ಲಿ ರಾಯಭಾರ ಕಚೇರಿಗೆ ತೆರಳಿದರು. ಅವರು ರಾಯಭಾರ ಕಚೇರಿಯನ್ನು ಧ್ವಂಸಗೊಳಿಸುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕಿದರು ಹಾಗೂ  ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧುಗೆ ಬೆದರಿಕೆ ಹಾಕಿದರು'' ಎಂದು  ಝಾ  ANI ಗೆ ತಿಳಿಸಿದ್ದಾರೆ.

Similar News