ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿ ಪ್ರಕಟ: ರವೀಂದ್ರ ಜಡೇಜ ಎ ಪ್ಲಸ್ ಗೆ ಭಡ್ತಿ, ಕೆ.ಎಲ್.ರಾಹುಲ್ ಗೆ ಹಿಂಭಡ್ತಿ

Update: 2023-03-27 15:12 GMT

ಹೊಸದಿಲ್ಲಿ: 2022-23ರ ಋತುವಿನ “ಕೇಂದ್ರ ಗುತ್ತಿಗೆ’ ನೀಡಲಾಗಿರುವ ಆಟಗಾರರ ದೊಡ್ಡಪಟ್ಟಿಯನ್ನು ಬಿಸಿಸಿಐ ರವಿವಾರ ರಾತ್ರಿ ಪ್ರಕಟಿಸಿದೆ. ಎಲ್ಲ 3 ಮಾದರಿ ಕ್ರಿಕೆಟ್ ನಲ್ಲಿ ನೀಡುತ್ತಿರುವ ಉತ್ತಮ ಪ್ರದರ್ಶನದ ಆಧಾರದಲ್ಲಿ  ಆಲ್‌ರೌಂಡರ್ ರವೀಂದ್ರ ಜಡೇಜಗೆ (Ravindra Jadeja ) 'ಎ' ಪ್ಲಸ್ ಗುತ್ತಿಗೆಯನ್ನು ನೀಡಲಾಗಿದೆ.

ಅಗ್ರ ಕ್ರಮಾಂಕದ ಬ್ಯಾಟರ್ ಕೆಎಲ್ ರಾಹುಲ್ ಸತತ ಕಳಪೆ ಪ್ರದರ್ಶನದ ನಂತರ 'ಬಿ' ಗ್ರೇಡ್‌ಗೆ ಹಿಂಬಡ್ತಿ ಪಡೆದಿದ್ದಾರೆ.

ಭುವನೇಶ್ವರ ಕುಮಾರ್, ಅಜಿಂಕ್ಯ ರಹಾನೆ, ಇಶಾಂತ್ ಶರ್ಮಾ, ವೃದ್ದಿಮಾನ್ ಸಹಾ, ದೀಪಕ್ ಚಹಾರ್ ಹಾಗೂ ಹನುಮಾ ವಿಹಾರಿ ಗುತ್ತಿಗೆಯಿಂದ ಸಂಪೂರ್ಣ ಹೊರಗುಳಿದಿದ್ದಾರೆ.

'ಎ' ಪ್ಲಸ್  ವಿಭಾಗದಲ್ಲಿ (7 ಕೋಟಿ ರೂ.) ಈ ಹಿಂದೆ  ಮೂವರು ಆಟಗಾರರಿದ್ದರೆ, ಈಗ ನಾಲ್ವರಿದ್ದಾರೆ. ಬಿಸಿಸಿಐ ಪ್ರಕಟಿಸಿರುವ 'ಎ' ಪ್ಲಸ್  ವಿಭಾಗದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ  ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಈ ತಿಂಗಳ ಆರಂಭದಲ್ಲಿ ಆಸ್ಟ್ರೇಲಿಯ  ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಜಯದಲ್ಲಿ ಜಡೇಜ ಪ್ರಮುಖ ಪಾತ್ರ ವಹಿಸಿದ್ದರು. ಅವರು ನಾಲ್ಕು ಪಂದ್ಯಗಳ ಸರಣಿಯಲ್ಲಿ 22 ವಿಕೆಟ್‌ಗಳನ್ನು ಪಡೆದಿದ್ದರು ಬಿಸಿಸಿಐ ಹೇಳಿಕೆಯ ಪ್ರಕಾರ, ವಾರ್ಷಿಕ ಒಪ್ಪಂದವನ್ನು ಅಕ್ಟೋಬರ್ 2022 ರಿಂದ ಸೆಪ್ಟೆಂಬರ್ 2023 ರವರೆಗೆ ನಿಗದಿಪಡಿಸಲಾಗಿದೆ.

ಬಿಸಿಸಿಐ  'ಎ' ಪ್ಲಸ್ (ರೂ. 7 ಕೋಟಿ), ಎ (ರೂ. 5 ಕೋಟಿ), 'ಬಿ'(ರೂ. 3 ಕೋಟಿ) ಮತ್ತು 'ಸಿ' (ರೂ. 1 ಕೋಟಿ)) ನಾಲ್ಕು ಗುಂಪುಗಳಲ್ಲಿ 26 ಕ್ರಿಕೆಟಿಗರಿಗೆ ರಿಟೈನರ್‌ಶಿಪ್ ಹಸ್ತಾಂತರಿಸಿದ್ದರಿಂದ ಭುವನೇಶ್ವರ ಕುಮಾರ, ಅಜಿಂಕ್ಯ ರಹಾನೆ  ಹಾಗೂ ಇಶಾಂತ್ ಶರ್ಮಾ ಒಪ್ಪಂದವನ್ನು ಪಡೆಯಲಿಲ್ಲ.

ಸ್ಪಿನ್ ಆಲ್‌ರೌಂಡರ್ ಅಕ್ಷರ್ ಅವರು 'ಎ' ವರ್ಗಕ್ಕೆ ಬಡ್ತಿ ಪಡೆದಿದ್ದಾರೆ, ಆದರೆ ವಿಕೆಟ್‌ಕೀಪರ್ ಬ್ಯಾಟರ್ ಕೆಎಸ್ ಭರತ್ ಕೂಡ 'ಸಿ' ಗುಂಪಿನಲ್ಲಿ ಸೇರಿಕೊಂಡು  ಮೊದಲ ಬಾರಿ  ಕೇಂದ್ರ ಒಪ್ಪಂದವನ್ನು ಪಡೆದರು.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಂಭವಿಸಿದ ಭೀಕರ ಅಪಘಾತದ ನಂತರ ಗಾಯಗೊಂಡು ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿರುವ ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್ ಹಾಗೂ  ಮುಹಮ್ಮದ್ ಶಮಿ 'ಎ' ವಿಭಾಗದಲ್ಲಿ ಉಳಿದಿದ್ದಾರೆ.

'ಬಿ' ಗುಂಪಿನಲ್ಲಿ ಚೇತೇಶ್ವರ ಪೂಜಾರ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮುಹಮ್ಮದ್ ಸಿರಾಜ್, ಸೂರ್ಯಕುಮಾರ್ ಯಾದವ್ ಮತ್ತು ಶುಭಮನ್ ಗಿಲ್ ಸೇರಿದಂತೆ ಆರು ಕ್ರಿಕೆಟಿಗರು ಇದ್ದಾರೆ.

ಉಮೇಶ್ ಯಾದವ್, ಶಿಖರ್ ಧವನ್, ಶಾರ್ದೂಲ್ ಠಾಕೂರ್ ಸೇರಿದಂತೆ ಒಟ್ಟು 11 ಆಟಗಾರರು ಸಿ ವಿಭಾಗದಲ್ಲಿ ಸ್ಥಾನ ಪಡೆದಿದ್ದಾರೆ. ಅವರಿಗೆ ಮಂಡಳಿಯಿಂದ 1 ಕೋಟಿ ರೂ. ಸಿಗಲಿದೆ.

Similar News