ಇಸ್ರೇಲ್ ನಲ್ಲಿ ಪ್ರಧಾನಿ ವಿರುದ್ಧ ಭುಗಿಲೆದ್ದ ಆಕ್ರೋಶ: ಕಾರ್ಮಿಕ ಸಂಘಟನೆ ಮುಷ್ಕರ; ರಕ್ಷಣಾ ಸಚಿವರ ವಜಾ‌

Update: 2023-03-27 17:15 GMT

ಟೆಲ್ಅವೀವ್, ಮಾ.27: ಪ್ರಸ್ತಾವಿತ ನ್ಯಾಯಾಂಗ ಸುಧಾರಣಾ ಯೋಜನೆ ಹಾಗೂ ಅದನ್ನು ಪ್ರಶ್ನಿಸಿದ ರಕ್ಷಣಾ ಸಚಿವರನ್ನು ವಜಾಗೊಳಿಸಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ದೇಶದಾದ್ಯಂತ ಪ್ರತಿಭಟನೆ ಭುಗಿಲೆದಿದ್ದು ಕಾರ್ಮಿಕ ಸಂಘಟನೆಗಳು ವ್ಯಾಪಕ  ಮುಷ್ಕರ ಆರಂಭಿಸಿವೆ ಎಂದು ವರದಿಯಾಗಿದೆ.

ಈ ಮಧ್ಯೆ, ಒತ್ತಡಕ್ಕೆ ಮಣಿದಿರುವ ನೆತನ್ಯಾಹು ನ್ಯಾಯಾಂಗ ಸುಧಾರಣೆ ಯೋಜನೆ ಕೈಬಿಡುವ ನಿರ್ಧಾರ ಪ್ರಕಟಿಸಬಹುದು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ ಯೋಜನೆ ಹಿಂಪಡೆದರೆ ಮೈತ್ರಿ ಸರಕಾರದಿಂದ ಹೊರಬರುವುದಾಗಿ ರಾಷ್ಟ್ರೀಯ ಭದ್ರತಾ ಸಚಿವ ಇತಮಾರ್ ಬೆನ್ಗ್ವಿವರ್ ಸರಕಾರಕ್ಕೆ ಎಚ್ಚರಿಕೆ ನೀಡಿರುವುದರಿಂದ ನೆತನ್ಯಾಹು ಅಡಕತ್ತರಿಯಲ್ಲಿ ಸಿಲುಕಿದ್ದಾರೆ ಎಂದು ವರದಿಯಾಗಿದೆ.

ಪ್ರಸ್ತಾವಿತ ಯೋಜನೆಯಿಂದ ಹಿಂದೆ ಸರಿಯುವಂತೆ ಸರಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ದೇಶದಾದ್ಯಂತ ಮುಷ್ಕರ ನಡೆಸುವಂತೆ ಪ್ರಮುಖ ಕಾರ್ಮಿಕ ಸಂಘಟನೆ ಹಿಸ್ತಾದ್ರತ್ ಯೂನಿಯನ್ ಮುಖ್ಯಸ್ಥ ಅರ್ನಾನ್ ಬರ್ಡೇವಿಡ್ ಕರೆ ನೀಡಿದ್ದಾರೆ. ಇದರ ಬೆನ್ನಿಗೇ, ಬೆನ್ಗ್ಯುರಿಯನ್ ವಿಮಾನನಿಲ್ದಾಣವು ನಿರ್ಗಮನವನ್ನು ತಕ್ಷಣದಿಂದ ಸ್ಥಗಿತಗೊಳಿಸಿರುವುದಾಗಿ ಘೋಷಿಸಿದೆ. ಆಸ್ಪತ್ರೆಗಳು ಹಾಗೂ ವೈದ್ಯಕೀಯ ಸಿಬಂದಿಗಳೂ ಮುಷ್ಕರಕ್ಕೆ ಕೈಜೋಡಿಸಿದ್ದಾರೆ.

ಪುರಸಭೆಗಳು ಮತ್ತು ಸ್ಥಳೀಯ ಆಡಳಿತ ಸಾರ್ವತ್ರಿಕ ಮುಷ್ಕರದಲ್ಲಿ ಸೇರಲು ಒಪ್ಪಿಕೊಂಡಿವೆ. ವ್ಯಾಪಾರ ಹಾಗೂ ಇತರ ಸ್ಥಳೀಯ ವ್ಯವಹಾರಗಳು ಈಗಾಗಲೇ ಕಾರ್ಯಾಚರಣೆ ಸ್ಥಗಿತಗೊಳಿಸಿವೆ. ಪಾಸ್ಓವರ್ ಆಚರಣೆಯ ಕಾರಣಕ್ಕೆ ಶಾಲೆಗಳಿಗೆ ಈಗಾಗಲೇ ರಜೆ ಸಾರಲಾಗಿದ್ದರೆ ಶಿಶುವಿಹಾರಗಳನ್ನೂ ಮುಚ್ಚಲು ಆಡಳಿತ ನಿರ್ಧರಿಸಿದೆ.

ನ್ಯಾಯಾಂಗ ಸುಧಾರಣೆಯ ಪ್ರಸ್ತಾವನೆಯನ್ನು ವಿರೋಧಿಸುತ್ತಿರುವ ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ ರನ್ನು ರವಿವಾರ ನೆತನ್ಯಾಹು ವಜಾಗೊಳಿಸಿದ ಬಳಿಕ ಟೆಲ್ಅವೀವ್ನಲ್ಲಿ ಭಾರೀ ಪ್ರತಿಭಟನೆ ನಡೆದಿದೆ. ಅಯಲಾನ್ ಹೆದ್ದಾರಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ರ್ಯಾಲಿ ನಡೆಸಿದ ಪ್ರತಿಭಟನಾಕಾರರು `ಪ್ರಜಾಪ್ರಭುತ್ವ ಚಿರಾಯುವಾಗಲಿ' ಎಂದು ಘೋಷಣೆ ಕೂಗಿದ್ದಾರೆ. ಜೆರುಸಲೇಂನಲ್ಲಿ ನೆತನ್ಯಾಹು ನಿವಾಸದ ಬಳಿ ಗುಂಪುಸೇರಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಜಲಫಿರಂಗಿ ಬಳಸಿ ಚದುರಿಸಿದ್ದಾರೆ. ಪ್ರತಿಭಟನೆಯ ಬಳಿಕ , ಯೋಜನೆಯ ಬಗ್ಗೆ ಮೈತ್ರಿ ಸರಕಾರದೊಳಗೇ ಕೆಲವರಿಂದ ವಿರೋಧ ವ್ಯಕ್ತವಾಗಿದೆ. ನ್ಯಾಯಾಂಗ ಸುಧಾರಣೆ ಕ್ರಮಗಳನ್ನು ತಕ್ಷಣವೇ ನಿಲ್ಲಿಸುವಂತೆ ಅಧ್ಯಕ್ಷ ಇಸಾಕ್ ಹೆರ್ಝಾಗ್ ಸರಕಾರವನ್ನು ಆಗ್ರಹಿಸಿದ್ದಾರೆ.

ಯೋಜಿತ ನ್ಯಾಯಾಂಗ ಸುಧಾರಣೆಗಳು ನ್ಯಾಯಾಧೀಶರ ನೇಮಕಾತಿಯನ್ನು ನಿರ್ಧರಿಸುವಲ್ಲಿ ಸರಕಾರಕ್ಕೆ ಹೆಚ್ಚಿನ ಅಧಿಕಾರವನ್ನು ನೀಡುತ್ತದೆ. ಅಧಿಕಾರದಲ್ಲಿರಲು ಅನರ್ಹನೆಂದು ಪರಿಗಣಿಸಲ್ಪಟ್ಟ ಮುಖಂಡನನ್ನು ವಜಾಗೊಳಿಸಲು ನ್ಯಾಯಾಲಯಕ್ಕೆ ಕಷ್ಟವಾಗಲಿದೆ. ಈ ಯೋಜನೆ ಭ್ರಷ್ಟಾಚಾರ ಪ್ರಕರಣ ಎದುರಿಸುತ್ತಿರುವ ನೆತನ್ಯಾಹು ಅವರ ಹಿತಾಸಕ್ತಿಗೆ ಪೂರಕವಾಗಿದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ. 

Similar News