ಸ್ಕಾಟ್ಲ್ಯಾಂಡ್ ಪ್ರಧಾನಮಂತ್ರಿಯಾಗಿ ಹಂಝಾ ಯೂಸುಫ್‌ ನೇಮಕ

ಅರೆಸ್ವಾಯತ್ತ ರಾಷ್ಟ್ರದ ಅತ್ಯುನ್ನತ ಹುದ್ದೆ ಆಲಂಕರಿಸಿದ ಪ್ರಪ್ರಥಮ ಮುಸ್ಲಿಂ ಹಾಗೂ ಬಿಳಿಯ ಜನಾಂಗಿಯೇತರ ವ್ಯಕ್ತಿ

Update: 2023-03-28 18:07 GMT

ಲಂಡನ್, ಮಾ.28: ಸ್ಕಾಟ್ಲ್ಯಾಂಡ್ನ  ಆಡಳಿತ ಪಕ್ಷದ ನೂತನ ನಾಯಕನಾಗಿ  ಪಾಕ್ ಮೂಲದ ಹಂಝಾ ಯೂಸುಫ್ ಮಂಗಳವಾರ ಆಯ್ಕೆಯಾಗಿದ್ದಾರೆ. ಇದರೊಂದಿಗೆ 55 ಲಕ್ಷ ಜನಸಂಖ್ಯೆಯ  ಅರೆಸ್ವಾಯತ್ತ ರಾಷ್ಟ್ರವಾದ ಸ್ಕಾಟ್ಲ್ಯಾಂಡ್ನ  ಪ್ರಧಾನಮಂತ್ರಿ  (ಫಸ್ಟ್ ಮಿನಿಸ್ಟರ್) ಸ್ಥಾನವನ್ನು ಆಲಂಕರಿಸಲಿರುವ  ಪ್ರಪ್ರಥಮ ಬಿಳಿಜನಾಂಗಿಯೇತರ ವ್ಯಕ್ತಿ  ಹಾಗೂ ಮುಸ್ಲಿಂ ಧರ್ಮೀಯ  ಎಂಬ ದಾಖಲೆಯನ್ನು ಅವರು ನಿರ್ಮಿಸಿದ್ದಾರೆ.

ಆಡಳಿತಾರೂಢ ಸ್ಕಾಟಿಶ್ ನ್ಯಾಶನಲ್ ಪಾರ್ಟಿ (ಎಸ್ಎನ್ಪಿ) ನಾಯಕನ ಆಯ್ಕೆಗಾಗಿ  ಪಕ್ಷದ ಸದಸ್ಯರೊಳಗೆ  ಮತದಾನ ನಡೆದಿತ್ತು.  ಯೂಸುಫ್ ಅವರು ತನ್ನ ಎದುರಾಳಿ ಕೇಟ್ ಫೋರ್ಬ್ಸ್ ಅವರನ್ನು ಅಲ್ಪ ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.  ಸ್ಕಾಟ್ಲ್ಯಾಂಡ್ ಬ್ರಿಟನ್ ದೇಶದ ಭಾಗವಾಗಿದ್ದರೂ, ಅರೆಸ್ವಾಯತ್ತ ರಾಷ್ಟ್ರದ ಸ್ಥಾನಮಾನವನ್ನು  ಹೊಂದಿದೆ.

ಸ್ಕಾಟ್ಲ್ಯಾಂಡ್ನ ಗ್ಲಾಸ್ಗೊದಲ್ಲಿ  ಪಾಕ್ ಮೂಲದ ವಲಸಿಗ ದಂಪತಿಗೆ ಜನಿಸಿದ್ದ ಯೂಸುಫ್ ಅವರು ಹಾಲಿ  ಸರಕಾರದಲ್ಲಿ ಆರೋಗ್ಯ ಸಚಿವರಾಗಿದ್ದಾರೆ. ಹಾಲಿ ಪ್ರಧಾನಮಂತ್ರಿ ನಿಕೋಲಾ ಸ್ಟುರ್ಜಿಯೊನ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಯೂಸುಫ್ ಸೇರಿದಂತೆ ಮೂವರು ಅಭ್ಯರ್ಥಿಗಳು ಕಣದಲ್ಲಿದ್ದರು.

ಸ್ಕಾಟ್ಲ್ಯಾಂಡ್ ಸರಕಾರದ   ಪ್ರಧಾನಮಂತ್ರಿಯಾಗಿ  ಮತ್ತು ಸ್ಕಾಟಿಶ್ ನ್ಯಾಶನಲ್ ಪಾರ್ಟಿಯ ನಾಯಕಿಯಾಗಿ  ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದ ನಿಕೋಲಾ ಅವರು ಕಳೆದ ತಿಂಗಳು ಅನಿರೀಕ್ಷಿತವಾಗಿ ರಾಜೀನಾಮೆ ಸಲ್ಲಿಸಿದ್ದರು.

ಸ್ಕಾಟ್ಲ್ಯಾಂಡ್  ನ್ಯಾಶನಲ್ ಪಾರ್ಟಿಯ ವರಿಷ್ಠನ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಯೂಸುಫ್ಗೆ  ಶೇ.52ರಷ್ಟು ಮತಗಳು ದೊರೆತಿದೆ.  ಮತದಾದಲ್ಲಿ ಎಸ್ಎನ್ಪಿ ಪಕ್ಷದ 72 ಸಾವಿರಕ್ಕೂ ಅಧಿಕ ಸದಸ್ಯರು ಭಾಗವಹಿಸಿದ್ದು, ಶೇ.70ರಷ್ಟು ಮತಚಲಾವಣೆಯಾಗಿತ್ತು.

ಚುನಾವಣಾ ಫಲಿತಾಂಶ ಘೋಷಣೆಯ ಬಳಿಕ  ಎಡಿನ್ಬರ್ಗ್ನಲ್ಲಿರುವ ಮುರ್ರೆಫೀಲ್ಡ್ ರಗ್ಬಿ ಕ್ರೀಡಾಂಗಣದಲ್ಲಿ ಕೃತಜ್ಞತಾ  ಭಾಷಣ ಮಾಡಿದ ಯೂಸುಫ್,  ‘‘ ಕೇವಲ ನನ್ನ ಪರವಾಗಿ   ಮತಚಲಾಯಿಸಿದರು ಮಾತ್ರವಲ್ಲದೆ,  ಪಕ್ಷದ ಎಲ್ಲಾ ಸದಸ್ಯರ ಹಿತದೃಷ್ಟಿಯಿಂದ ನಾನು ಎಸ್ಎನ್ಪಿ ನೇತೃತ್ವ ವಹಿಸಿಕೊಂಡಿದ್ದೇನೆ. ರಾಜಕೀಯ ಬೇಧಭಾವವಿಲ್ಲದೆ ನಮ್ಮ ದೇಶದ ಎಲ್ಲಾ ಪೌರರ  ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಸ್ಕಾಟ್ಲ್ಯಾಂಡನ್ನು ಮುನ್ನಡೆಸುತ್ತೇನೆ’’ ಎಂದು ಹೇಳಿದರು.

60 ವರ್ಷಗಳ ಹಿಂದೆ  ಪಾಕಿಸ್ತಾನದ ಪಂಜಾಬ್ ಪ್ರಾಂತದಿಂದ ಸ್ಕಾಟ್ಲ್ಯಾಂಡ್ನ ಗ್ಲಾಸ್ಗೊಗೆ ವಲಸೆ ಬಂದ ತನ್ನ ದಿವಂಗತ ತಾತ  ಹಾಗೂ ಅಜ್ಜಿ ಅವರಿಗೆ ಈ ಸಂದರ್ಭದಲ್ಲಿ ಯೂಸುಫ್ ಶ್ರದ್ದಾಂಜಲಿ ಅರ್ಪಿಸಿದರು.

‘‘ ಎರಡು ತಲೆಮಾರುಗಳ ಆನಂತರ ತಮ್ಮ ಮೊಮ್ಮಗನು, ಒಂದು ದಿನ ಸ್ಕಾಟ್ಲ್ಯಾಂಡ್   ಪ್ರಧಾನಮಂತ್ರಿಯಾಗಲಿದ್ದಾನೆಂಬ ಕನಸನ್ನೂ ಅವರು ಕಂಡಿರಲಿಕ್ಕಿಲ್ಲ ಎಂದು ಯೂಸುಫ್ ಭಾವುಕರಾಗಿ ಹೇಳಿದರು. ನಮಗೆಲ್ಲರಿಗೂ ಮನೆಯಾಗಿರುವ ಈ ದೇಶವನ್ನು  ಮುನ್ನಡೆಸುವುದಕ್ಕೆ ನಿಮ್ಮ ಚರ್ಮದ ಬಣ್ಣ, ನಿಮ್ಮ ಧರ್ಮವು  ಅಡ್ಡಿಯಾಗಲಾರದೆಂಬ ನಾವು ಒಂದು ಸ್ಪಷ್ಟ ಸಂದೇಶವನ್ನು ರವಾನಿಸಿದ್ದೇವೆ ಎಂಬುದನ್ನು  ಈ ಸಂದರ್ಭದಲ್ಲಿ ತಿಳಿಸಲು ಹೆಮ್ಮೆಪಡುತ್ತೇವೆ.’’ ಎಂದು ಯೂಸುಫ್ ಹೇಳಿದರು.

ನಿರ್ಗಮನ ನಾಯಕಿ  ನಿಕೋಲಾ ಸ್ಟುರ್ಜೆನ್ ಅವರ  ಉದಾರ ಸಾಮಾಜಿಕ ಧೋರಣೆಗಳ ಬಗ್ಗೆ ಸಹಮತ ಹೊಂದಿರುವ ನಾಯಕನೆಂದೇ ಯುಸೂಫ್ ಅವರನ್ನು ಬಣ್ಣಿಸಲಾಗುತ್ತಿದೆ.
ಬ್ರಿಟನ್ ನ ಆಳ್ವಿಕೆಯಿಂದ ಸ್ಕಾಟ್ಲ್ಯಾಂಡ್ ಅನ್ನು ಹೊರತರುವ  ತನ್ನ ಉದ್ದೇಶವನ್ನು ಈಡೇರಿಸುವಲ್ಲಿ ಸ್ಟುರ್ಜೆನ್ ವಿಫಲರಾಗಿದ್ದರು. ಅವರು ಜಾರಿಗೊಳಿಸಿದ್ದ ವಿವಾದಾತ್ಮಕ  ಲಿಂಗಾಂತರಿ ಹಕ್ಕುಗಳ ಕಾಯ್ದೆಯು ಪಕ್ಷದಲ್ಲಿ ಒಡಕನ್ನು ಮೂಡಿಸಿತ್ತು. ಸ್ಕಾಟ್ಲ್ಯಾಂಡ್ನಲ್ಲಿ ಜನರು  ಕಾನೂನುಬದ್ಧವಾಗಿ ಲಿಂಗ ಪರಿವರ್ತನೆ ಮಾಡಿಸಿಕೊಳ್ಳಲು ಈ ಕಾಯ್ದೆಯು ಅವಕಾಶ ನೀಡಿದೆ

Similar News