ಚೀನಾದೊಂದಿಗಿನ ಸಂಬಂಧದಲ್ಲಿ ಎಚ್ಚರಿಕೆ ಅಗತ್ಯ ಇಯು ಕಮಿಷನರ್

Update: 2023-03-30 17:30 GMT

ಬ್ರಸೆಲ್ಸ್, ಮಾ.30: ಚೀನಾದೊಂದಿಗಿನ ತಂತ್ರಜ್ಞಾನ ಕ್ಷೇತ್ರದ ವ್ಯವಹಾರದಲ್ಲಿ ಅತ್ಯಂತ ಎಚ್ಚರಿಕೆ ವಹಿಸುವ ಅಗತ್ಯವಿದೆ. ಚೀನಾದೊಂದಿಗಿನ ಸಂಬಂಧದಲ್ಲಿನ ಅಪಾಯವನ್ನು ಕನಿಷ್ಟಗೊಳಿಸಲು ಯುರೋಪಿಯನ್ ಯೂನಿಯನ್(ಇಯು) ಗಮನ ನೀಡಬೇಕಾಗಿದೆ ಎಂದು ಇಯು ಕಮಿಷನ್‍ನ  ಅಧ್ಯಕ್ಷೆ ಉರ್ಸುಲಾ ವಾನ್‍ಡರ್ ಲಿಯೆನ್ ಗುರುವಾರ ಹೇಳಿದ್ದಾರೆ.

ಕಾರ್ಯತಂತ್ರದ ವಿಷಯದಲ್ಲಿ ಚೀನಾ ಕಠಿಣ ನಿಲುವು ತಳೆಯುತ್ತಿದೆ, ಆದರೂ ಸಂಬಂಧಗಳಲ್ಲಿನ ಅಪಾಯಗಳನ್ನು ಕಡಿಮೆ ಮಾಡಿಕೊಂಡು ಆ ದೇಶದೊಂದಿಗಿನ ಸಂವಹನವನ್ನು ಕಾಪಾಡಿಕೊಳ್ಳಬೇಕಿದೆ ಎಂದ ಅವರು, ಕಳೆದ ಕೆಲ ವರ್ಷಗಳಲ್ಲಿ ಚೀನಾದೊಂದಿಗಿನ ಸಂಬಂಧ ಕಷ್ಟಕರವಾಗಿದೆ ಎಂದರು.

ಚೀನಾದ ವಿಷಯದಲ್ಲಿ ಕಠಿಣ ಕಾರ್ಯನೀತಿ ಅನುಸರಿಸುವಂತೆ ಅಮೆರಿಕದ ತೀವ್ರ ಒತ್ತಡದ ಹೊರತಾಗಿಯೂ, ಚೀನಾದೊಂದಿಗಿನ ರಾಜತಾಂತ್ರಿಕ ಸ್ಥಿರತೆ ಮತ್ತು ಮುಕ್ತ ಸಂವಹನ ಮಾರ್ಗಗಳನ್ನು ಖಾತರಿ ಪಡಿಸುವಂತೆ ಉರ್ಸುಲಾ ವಾನ್‍ಡರ್ ಆಗ್ರಹಿಸಿದ್ದಾರೆ. ರಶ್ಯದೊಂದಿಗೆ ಚೀನಾ ನಿಕಟ ಬಾಂಧವ್ಯ ಮುಂದುವರಿಸಲಿದೆ ಎಂದು ಕಳೆದ ವಾರ ಚೀನಾ ಅಧ್ಯಕ್ಷ ಕ್ಸಿಜಿಂಪಿಂಗ್ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ ವಾನ್‍ಡರ್ ` ಉಕ್ರೇನ್‍ನಲ್ಲಿ ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ಆ ದೇಶದಿಂದ ರಶ್ಯದ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಮಾಡುವುದು ಜಿಂಪಿಂಗ್ ಹೊಣೆಯಾಗಿದೆ' ಎಂದರು.

ಬಲಿಷ್ಟ ಆರ್ಥಿಕ ಶಕ್ತಿಯಾಗಿರುವ ಚೀನಾದೊಂದಿಗಿನ ಸಂಬಂಧದಿಂದ ಬೇರ್ಪಡುವುದು ಕಾರ್ಯಸಾಧ್ಯವಲ್ಲ. ಆದರೆ ಈ ಸಂಬಂಧದಲ್ಲಿನ ಅಪಾಯವನ್ನು ಕಡಿಮೆಗೊಳಿಸುವತ್ತ ಗಮನ ಹರಿಸಬೇಕಿದೆ. ಆರ್ಥಿಕವಾಗಿ, ಚೀನಾದೊಂದಿಗಿನ ಸಂಬಂಧವನ್ನು  `ಮರುಸಮತೋಲನ' ಮಾಡಬೇಕಿದೆ ಮತ್ತು ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಬೇಕಿದೆ. ಯುರೋಪಿಯನ್ ಯೂನಿಯನ್ ಆರ್ಥಿಕ ವಿರೂಪಗಳನ್ನು ಎದುರಿಸಲು ಮತ್ತು ತನ್ನ ಭದ್ರತಾ ಹಿತಾಸಕ್ತಿಗಳನ್ನು ರಕ್ಷಿಸಲು ಈಗಾಗಲೇ ಹಲವು ಕ್ರಮಗಳನ್ನು ಹೊಂದಿದೆ. ಆದರೆ ಬದಲಾಗುತ್ತಿರುವ ಚೀನಾದೊಂದಿಗೆ ಹಂಚಿಕೊಂಡಿರುವ ಹೈ-ಟೆಕ್ ಕ್ಷೇತ್ರದ ಬಗ್ಗೆಯೂ ಗಮನಹರಿಸಬೇಕಿದೆ .

ವ್ಯವಸ್ಥಿತ ಪ್ರತಿಸ್ಪರ್ಧಿಯ ಮಿಲಿಟರಿ ಅಥವಾ ಗುಪ್ತಚರ ಸಾಮಥ್ರ್ಯಗಳನ್ನು ಹೆಚ್ಚಿಸುವುದಿಲ್ಲ ಎಂದು ಖಾತರಿಪಡಿಸಲು ಕೆಲವು ಸೂಕ್ಷ್ಮತಂತ್ರಜ್ಞಾನಗಳಲ್ಲಿ ಹೂಡಿಕೆಯ ಹೊರಹರಿವನ್ನು ನಿಯಂತ್ರಿಸುವ ಕ್ರಮಗಳ ಕುರಿತ ತನ್ನ ಯೋಜನೆಗಳನ್ನು ಯುರೋಪಿಯನ್ ಯೂನಿಯನ್  ಈ ವರ್ಷಾಂತ್ಯ ಪ್ರಸ್ತುತಪಡಿಸಲಿದೆ  ಎಂದು  ಉರ್ಸುಲಾ ವಾನ್‍ಡರ್ ಲಿಯೆನ್ ಹೇಳಿದ್ದಾರೆ.  

Similar News