ಉತ್ತರ ಕೊರಿಯಾ ಸಂಸ್ಥಾಪಕನ ಭಾವಚಿತ್ರಕ್ಕೆ ಬೆರಳು ತೋರಿಸಿದ್ದಕ್ಕೆ ಗರ್ಭಿಣಿ ಮಹಿಳೆಗೆ ಮರಣದಂಡನೆ ಶಿಕ್ಷೆ

Update: 2023-04-01 16:44 GMT

ಪ್ಯೋಂಗ್ಯಾಂಗ್, ಎ.1: ಉತ್ತರ ಕೊರಿಯಾದ ಸಂಸ್ಥಾಪಕ ಕಿಮ್ ಜೊಂಗ್ ರ ಭಾವಚಿತ್ರದತ್ತ ಬೆರಳು ತೋರಿಸಿ ಅಪರಾಧ ಎಸಗಿದ್ದಾರೆ ಎಂಬ ಕಾರಣಕ್ಕೆ 6 ತಿಂಗಳ ಗರ್ಭಿಣಿ ಮಹಿಳೆಗೆ ಅಲ್ಲಿನ ಸರಕಾರ ಮರಣದಂಡನೆ ಶಿಕ್ಷೆ ವಿಧಿಸಿದೆ ಎಂದು ದಕ್ಷಿಣ ಕೊರಿಯಾ ವರದಿ ಮಾಡಿದೆ.

ಉತ್ತರ ಕೊರಿಯಾದಲ್ಲಿ ನಡೆಯುತ್ತಿರುವ ವ್ಯಾಪಕ ಮಾನವಹಕ್ಕುಗಳ ಉಲ್ಲಂಘನೆಗೆ ಇದೊಂದು ಸ್ಪಷ್ಟ ಉದಾಹರಣೆಯಾಗಿದೆ ಎಂದು ಕೊರಿಯಾದ ಆಂತರಿಕ ವ್ಯವಹಾರಗಳನ್ನು ನಿರ್ವಹಿಸುವ ಸಚಿವಾಲಯದ 450 ಪುಟಗಳ ವರದಿಯಲ್ಲಿ ಉಲ್ಲೇಖಿಸಲಾಗಿದೆ. 2017ರಿಂದ 2022ರ ಅವಧಿಯಲ್ಲಿ  ದೇಶದಿಂದ ಪಲಾಯನ ಮಾಡಿರುವ 500ಕ್ಕೂ ಅಧಿಕ ಉತ್ತರ ಕೊರಿಯಾ ನಾಗರಿಕರ ಹೇಳಿಕೆಯನ್ನು ಆಧರಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಉತ್ತರ ಕೊರಿಯಾದ ನಾಗರಿಕರ ಬದುಕುವ ಹಕ್ಕಿಗೆ ಹೆಚ್ಚಿನ ಬೆದರಿಕೆ ಇರುವುದನ್ನು ಇದು ಸ್ಪಷ್ಟಪಡಿಸಿದೆ ಎಂದು ಸಚಿವಾಲಯ ಹೇಳಿದೆ.

ಮಾದಕ ವಸ್ತುಗಳಿಗೆ ಸಂಬಂಧಿಸಿದ ಅಪರಾಧ, ದಕ್ಷಿಣ ಕೊರಿಯಾದ ವೀಡಿಯೊಗಳನ್ನು ಪ್ರಸಾರ ಮಾಡಿರುವುದು, ಧಾರ್ಮಿಕ ಮತ್ತು ಮೂಢನಂಬಿಕೆ ಚಟುವಟಿಕೆಗಳಿಗೂ ಉತ್ತರ ಕೊರಿಯಾದಲ್ಲಿ ಮರಣದಂಡನೆ ಶಿಕ್ಷೆ ನೀಡಲಾಗುತ್ತದೆ. 6 ತಿಂಗಳ ಗರ್ಭಿಣಿ  ಮಹಿಳೆಯೊಬ್ಬಳು ತನ್ನ ಮನೆಯಲ್ಲಿ ನೃತ್ಯ ಮಾಡುತ್ತಿದ್ದಾಗ ಉತ್ತರ ಕೊರಿಯಾದ ಸಂಸ್ಥಾಪಕರ ಭಾವಚಿತ್ರದತ್ತ ಬೆರಳು ತೋರಿಸಿದಳು ಎಂಬ ಕಾರಣಕ್ಕೆ ಆಕೆಗೆ ಮರಣದಂಡನೆ ಶಿಕ್ಷೆ ನೀಡಲಾಗಿದೆ.

16 ವರ್ಷದ 6 ಯುವಕರು ತಮ್ಮ ಮನೆಯಲ್ಲಿ ದಕ್ಷಿಣ ಕೊರಿಯಾದ ವೀಡಿಯೊ ವೀಕ್ಷಿಸುತ್ತಿದ್ದರು ಎಂಬ ಕಾರಣಕ್ಕೆ ಅವರನ್ನು  ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕೆಲವು ಕುಟುಂಬಗಳನ್ನು ಬೆದರಿಸಿ ಅಥವಾ ಬ್ಲ್ಯಾಕ್ಮೇಲ್ ಮಾಡಿ ಸದಸ್ಯರನ್ನು ವೈದ್ಯಕೀಯ ಪ್ರಯೋಗಕ್ಕೆ ಬಳಸಿಕೊಳ್ಳಲಾಗುತ್ತಿದೆ. ಕೆಲವು ಮಹಿಳೆಯರ ಗರ್ಭಕೋಶಗಳನ್ನು ಬಲವಂತ ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯಲಾಗುತ್ತಿದೆ ಎಂದು ವರದಿ ಹೇಳಿದೆ.

Similar News