ಇಂದೋರ್‌ ದೇವಾಲಯ ದುರಂತ: ಉಪವಾಸದ ನಡುವೆ ಜನರನ್ನು ರಕ್ಷಿಸಿದ ಖಾಝಿ ಮಜೀದ್‌ ಫಾರೂಕಿ

Update: 2023-04-01 18:01 GMT

ಇಂದೋರ್: ರಾಮ ನವಮಿಯ ಸಂದರ್ಭದಲ್ಲಿ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ ದಾರುಣ ಘಟನೆ ನಡೆದಿದ್ದು, ಈ ದುರ್ಘಟನೆಯಲ್ಲಿ ಇದುವರೆಗೆ 35 ಮಂದಿ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯ ವೇಳೆ ಅಲ್ಲಿಗೆ ಸಹಾಯಕ್ಕೆ ಧಾವಿಸಿ ಬಂದ ಮುಸ್ಲಿಂ ಉಪವಾಸಿಗರೊಬ್ಬರು ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ. 

ಅಪಘಾತದ ಮಾಹಿತಿ ತಿಳಿದ ತಕ್ಷಣ ಖಾಝೀ ಅಬ್ದುಲ್ ಮಜೀದ್ ಫಾರೂಕಿ ಸ್ಥಳಕ್ಕೆ ಆಗಮಿಸಿ, ತಮ್ಮ ಉಪವಾಸವನ್ನೂ ಲೆಕ್ಕಿಸದೆ ರಕ್ಷಣಾ ಕಾರ್ಯಾಚರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಆ ಮೂಲಕ ಹಲವು ಜನರನ್ನು ರಕ್ಷಿಸಿದ್ದಾರೆ ಎಂದು ವರದಿಯಾಗಿದೆ.  

ಅಪಘಾತದ ಸುದ್ದಿ ಬಂದಾಗ ನಾನು ತೋಟದಲ್ಲಿದ್ದೆ ಎಂದು ಖಾಝಿ ಅಬ್ದುಲ್ ಮಜೀದ್ ಫಾರೂಕಿ ತಿಳಿಸಿದ್ದಾರೆ. ಸ್ಥಳದಿಂದ ಕಿರುಚಾಟ ಕೇಳಿಸಿತು. ಸ್ವಲ್ಪ ಸಮಯದ ನಂತರ ದೇವಸ್ಥಾನದಲ್ಲಿ ಅವಘಡ ಸಂಭವಿಸಿರುವುದು ತಿಳಿಯಿತು. ಅಪಘಾತದ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ತಡೆಯಲಾರದೆ ನನ್ನ ತಂಡದೊಂದಿಗೆ ಸ್ಥಳಕ್ಕೆ ತಲುಪಿದೆ. ನಮ್ಮೊಂದಿಗೆ ಅನೇಕ ನಾಗರಿಕ ರಕ್ಷಣಾ ಸಿಬ್ಬಂದಿ ಇದ್ದರು. ಜನಸಂದಣಿಯನ್ನು ತೆರವುಗೊಳಿಸಿ ರಕ್ಷಣಾ ಕಾರ್ಯ ಆರಂಭಿಸಿದೆವು ಎಂದು ಸ್ವತಃ ನಾಗರಿಕ ರಕ್ಷಣಾ ಕಾರ್ಯಕರ್ತರಾಗಿರುವ ಮಜೀದ್ ಫಾರೂಕಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಪೋಲೀಸರ ಆಗಮನದ ಮೊದಲು ಸ್ಥಳದಲ್ಲಿ ಹಾಜರಾಗಿದ್ದ ಮಜೀದ್‌ 

ಅಪಘಾತದ ಬಗ್ಗೆ ಮಾಹಿತಿ ಪಡೆದು ಪೊಲೀಸರು ಸ್ಥಳಕ್ಕೆ ತಲುಪುವ ಮೊದಲೇ ಅಬ್ದುಲ್ ಮಜೀದ್ ಫಾರೂಕಿ ಸ್ಥಳಕ್ಕೆ ತಲುಪಿದ್ದರು. ನಾವು ಸ್ಥಳವನ್ನು ತಲುಪಿದಾಗ ಅಲ್ಲಿ ನೂಕುನುಗ್ಗಲಿತ್ತು, ಕಾಲ್ತುಳಿತ ಸಂಭವಿಸಿದೆ ಎಂದು ಅಲ್ಲಿದ್ದವರು ತಿಳಿಸಿದರು. ಜನರ ಗುಂಪನ್ನು ತೆರವುಗೊಳಿಸುವ ಮೂಲಕ ರಕ್ಷಣೆ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆವು ಎಂದು ಭಾವುಕರಾಗಿ ಮಜೀದ್‌ ಹೇಳಿದ್ದಾರೆ. ಘಟನೆಯ ಭೀಕರತೆ ಅವರಿಗೆ ತಾಕಿದ ರೀತಿ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿದ್ದವು.   
 
ರಾಮ ನವಮಿಯ ಸಂಭ್ರಮದಲ್ಲಿ ಇಂದೋರ್‌ನ ಬೆಳೇಶ್ವರ ಮಹಾದೇವ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಸುಮಾರು 50 ಜನರು ಈ ಮೇಲ್ಛಾವಣಿಯಲ್ಲಿ ನಿಂತಿದ್ದರು, ಜನಸಂದಣಿ ಹೆಚ್ಚಾಗಿ ಬಾವಿಯ ಮೇಲೆ ನಿರ್ಮಿಸಲಾಗಿದ್ದ ಮೇಲ್ಛಾವಣಿ ಕುಸಿದು ಬಿದ್ದಿದೆ. ಆರತಿ ಮತ್ತು ಹವನ ಮಾಡುತ್ತಿದ್ದಂತೆ ಮೇಲ್ಛಾವಣಿ ಕುಸಿದಿದ್ದು, ಮೇಲೆ ನಿಂತಿದ್ದ ಜನರು ಬಾವಿಗೆ ಬಿದ್ದಿದ್ದಾರೆ. ಅಪಘಾತದಲ್ಲಿ ಈವರೆಗೆ 35 ಮಂದಿಯ ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Similar News