ಪಂದ್ಯ ಆರಂಭಕ್ಕೆ ಮುನ್ನವೇ ಆರ್‌ಸಿಬಿಗೆ ಬ್ಯಾಡ್‌ನ್ಯೂಸ್

Update: 2023-04-02 03:07 GMT

ಬೆಂಗಳೂರು: ಪ್ರಸಕ್ತ ಋತುವಿನ ಐಪಿಎಲ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಆಡಲು ಸಜ್ಜಾಗುತ್ತಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಗಣ್ಯ ಆಟಗಾರರ ಅನುಪಸ್ಥಿತಿ ಕಾಡುತ್ತಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಬದ್ಧತೆಯಿಂದಾಗಿ ಶ್ರೀಲಂಕಾದ ಆಲ್‌ರೌಂಡರ್ ವನೀಂದು ಹಸರಂಗ ಏಪ್ರಿಲ್ 9ರ ಬಳಿಕ ಲಭ್ಯವಾಗಲಿದ್ದಾರೆ ಎಂದು ಮುಖ್ಯ ಕೋಚ್ ಸಂಜಯ್ ಬಂಗಾರ್ ಹೇಳಿದ್ದಾರೆ.

ಪ್ರಸಕ್ತ ಋತುವಿನ ತನ್ನ ಮೊದಲ ಪಂದ್ಯದಲ್ಲಿ ಭಾನುವಾರ ಆರ್‌ಸಿಬಿ ತಂಡ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಸವಾಲನ್ನು ಎದುರಿಸಲಿದೆ. ಹಸರಂಗ ಕಳೆದ ಸೀಸನ್‌ನಲ್ಲಿ ಮುಂಚೂಣಿ ಬೌಲರ್ ಆಗಿದ್ದರು. ಒಟ್ಟಾರೆ 16 ಪಂದ್ಯಗಳಲ್ಲಿ 16.53 ಸರಾಸರಿಯೊಂದಿಗೆ 26 ವಿಕೆಟ್ ಕಿತ್ತಿದ್ದ ಅವರು ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳಲ್ಲಿ ಎರಡನೇ ಸ್ಥಾನದಲ್ಲಿದ್ದರು. 7.54 ಎಕಾನಮಿ ರೇಟ್ ಹೊಂದಿದ್ದ ಅವರು 18 ರನ್‌ಗಳಿಗೆ 5 ವಿಕೆಟ್ ಕಿತ್ತದ್ದು ಶ್ರೇಷ್ಠ ಸಾಧನೆಯಾಗಿತ್ತು. ಹಸರಂಗ ಈ ತಿಂಗಳ 9ರ ಬಳಿಕವಷ್ಟೇ ಲಭ್ಯವಾಗಲಿದ್ದಾರೆ ಎಂದು ಬಂಗಾರ್ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದರು.

ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆಸ್ಟ್ರೇಲಿಯಾ ವೇಗಿ ಜೋಶ್ ಹ್ಯಾಸಲ್‌ವುಡ್ ಕೂಡಾ ಟೂರ್ನಿಯ ಮೊದಲರ್ಧದ ಪಂದ್ಯಗಳಿಗೆ ಲಭ್ಯರಿರುವುದಿಲ್ಲ. ಇವರ ಬದಲು ಇಂಗ್ಲೆಂಡ್ ವೇಗಿ ರೀಸ್ ಟೋಲ್ಪೆ ಸ್ಥಾನ ಪಡೆದಿದ್ದಾರೆ. ಹಿಮ್ಮಡಿ ನೋವಿನಿಂದಾಗಿ ರಜತ್ ಪಾಟಿದಾರ್ ಕೂಡಾ ಮೊದಲ ಅರ್ಧದಷ್ಟು ಪಂದ್ಯಗಳಲ್ಲಿ ಆಡುವುದು ಅಸಾಧ್ಯ ಎಂದು ಬಂಗಾರ್ ವಿವರಿಸಿದರು.

ಕಾಲಿನ ಗಾಯದ ಬಳಿಕ ಇತ್ತೀಚೆಗಷ್ಟೇ ಏಕದಿನ ತಂಡಕ್ಕೆ ಮರಳಿದ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಭಾನುವಾರ ಮೈದಾನಕ್ಕೆ ಇಳಿಯುವುದು ತಂಡಕ್ಕೆ ಸಮಾಧಾನದ ವಿಚಾರ. ನ್ಯೂಜಿಲೆಂಡ್ ಆಲ್‌ರೌಂಡರ್ ಮೈಕೆಲ್ ಬ್ರೇಸ್‌ವೆಲ್ ಅವರನ್ನು ಖರೀದಿಸಲು ತಂಡ ಮುಂದಾಗಿತ್ತು. ಆದರೆ ಅವರ ಬದಲು ಇಂಗ್ಲೆಂಡ್ ಆಲ್‌ರೌಂಡರ್ ವಿಲ್ ಜ್ಯಾಕ್ಸ್ ಅವರನ್ನು ಖರೀದಿಸಬೇಕಾಯಿತು. ಇದೀಗ ಅವರು ಗಾಯಗೊಂಡಿರುವುದರಿಂದ ಬೇರೆ ಆಲ್‌ರೌಂಡರ್ ಅವರನ್ನು ಆಡಿಸಬೇಕಾಗುತ್ತದೆ ಎಂದು ಬಂಗಾರ್ ಸ್ಪಷ್ಟಪಡಿಸಿದರು.

Similar News