×
Ad

ಕಡ್ಡಾಯ ಮರಣದಂಡನೆ ಶಿಕ್ಷೆ ರದ್ದುಗೊಳಿಸಿದ ಮಲೇಶ್ಯಾ

Update: 2023-04-03 23:07 IST

ಕೌಲಲಾಂಪುರ, ಎ.3: ಮಲೇಶ್ಯಾದ ಸಂಸತ್ತು ಸೋಮವಾರ ಕಡ್ಡಾಯ ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸಲು ವ್ಯಾಪಕವಾದ ಕಾನೂನು ಸುಧಾರಣೆಗಳನ್ನು ಅಂಗೀಕರಿಸಿದೆ.

ಮರಣದಂಡನೆ ಶಿಕ್ಷೆಯಾಗುವ ಅಪರಾಧಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಮತ್ತು ಸಹಜ ಜೀವಾವಧಿ ಶಿಕ್ಷೆ(ಪರೋಲ್ ಅಥವಾ ಶಿಕ್ಷೆ ಕಡಿತಕ್ಕೆ ಅವಕಾಶ ಇಲ್ಲದ ಜೀವಾವಧಿ ಶಿಕ್ಷೆ)ಯನ್ನೂ ರದ್ದುಗೊಳಿಸುವ ಈ ಉಪಕ್ರಮವನ್ನು ಮಾನವ ಹಕ್ಕುಗಳ ಸಂಘಟನೆಗಳು ಸ್ವಾಗತಿಸಿವೆ. ಮಲೇಶ್ಯಾದಲ್ಲಿ 2018ರಿಂದ ಮರಣದಂಡನೆ ಶಿಕ್ಷೆಯ ಮೇಲೆ ನಿಷೇಧ ಜಾರಿಯಲ್ಲಿದೆ.

ಇದೀಗ ಮಾಡಲಾಗಿರುವ ತಿದ್ದುಪಡಿಯ ಪ್ರಕಾರ, ಮರಣದಂಡನೆ ಶಿಕ್ಷೆಗೆ ಪರ್ಯಾಯವಾಗಿ 30ರಿಂದ 40 ವರ್ಷದವರೆಗಿನ ಜೈಲುಶಿಕ್ಷೆ ವಿಧಿಸಬಹುದಾಗಿದೆ. ಅಲ್ಲದೆ ಮಲೇಶ್ಯಾದ ಕಾನೂನಿನ ಪ್ರಕಾರ ಜೀವಾವಧಿ ಶಿಕ್ಷೆಯ ಅವಧಿ 30 ವರ್ಷ ಎಂಬುದನ್ನು ಉಳಿಸಿಕೊಳ್ಳಲಾಗಿದೆ. ಬಂದೂಕು ಪೂರೈಕೆ, ಕಳ್ಳಸಾಗಣೆ, ಅಪಹರಣದಂತಹ ಕೆಲವು ಗಂಭೀರ ಪ್ರಕರಣಗಳಿಗೆ(ಸಾವಿಗೆ ಕಾರಣವಾಗದ ಅಪರಾಧಗಳು) ಮರಣದಂಡನೆ ಶಿಕ್ಷೆ ಒದಗಿಸುವ ಆಯ್ಕೆಯನ್ನೂ ರದ್ದುಗೊಳಿಸಲಾಗಿದೆ.

ಮರಣದಂಡನೆ ಶಿಕ್ಷೆ ವಿಧಿಸುವುದರಿಂದ ನಿರೀಕ್ಷಿತ ಪರಿಣಾಮ ಸಾಧ್ಯವಾಗದ ಕಾರಣ ಕಡ್ಡಾಯ ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸಲಾಗಿದೆ ಎಂದು ಮಲೇಶ್ಯಾದ ಸಹಾಯಕ ಕಾನೂನು ಸಚಿವ ರಾಂಕೃಪಾಲ್ ಸಿಂಗ್ ಹೇಳಿದ್ದಾರೆ. 

Similar News