ಅರುಣಾಚಲ ಪ್ರದೇಶದ 11 ಸ್ಥಳಗಳ ಹೆಸರು ಬದಲಿಸಿದ ಚೀನಾ!

Update: 2023-04-04 02:48 GMT

ಹೊಸದಿಲ್ಲಿ: ದಕ್ಷಿಣ ಟಿಬೆಟ್ ಎಂದು ಚೀನಾ ಪ್ರತಿಪಾದಿಸುತ್ತಾ ಬಂದಿರುವ ಅರುಣಾಚಲ ಪ್ರದೇಶದ 11 ಸ್ಥಳಗಳ ಹೆಸರುಗಳನ್ನು ಇದೀಗ ಆ ದೇಶ ಬದಲಿಸಿದ್ದು, ಚೀನಾದ ಈ ನಡೆಯಿಂದ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಹದಗೆಡುವ ನಿರೀಕ್ಷೆ ಇದೆ. ಹಲವು ದಶಕಗಳಿಂದ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಬೂದಿಮುಚ್ಚಿದ ಕೆಂಡವಾಗಿಯೇ ಉಳಿದಿದ್ದು, ಮರು ನಾಮಕರಣ ಕ್ರಮದಿಂದ ಸ್ಫೋಟಗೊಳ್ಳುವ ಸಾಧ್ಯತೆ ಇದೆ.

ಪರ್ವತ ಶಿಖರಗಳು, ನದಿಗಳು ಮತ್ತು ವಸತಿ ಪ್ರದೇಶಗಳ ಹೆಸರುಗಳನ್ನು ಬದಲಿಸಲಾಗಿದೆ. ಚೀನಾ ಏಕಪಕ್ಷೀಯವಾಗಿ ಅರುಣಾಚಲ ಪ್ರದೇಶದ ಸ್ಥಳಗಳ ಮರುನಾಮಕರಣ ಮಾಡುತ್ತಿರುವ ಮೂರನೇ ಪ್ರಕರಣ ಇದಾಗಿದ್ದು, ಇದಕ್ಕೂ ಮುನ್ನ 2017ರ ಏಪ್ರಿಲ್ ಹಾಗೂ 2021ರ ಡಿಸೆಂಬರ್‌ನಲ್ಲಿ ಇಂಥದ್ದೇ ಕ್ರಮ ಕೈಗೊಂಡಿತ್ತು.

ಈ ಬೆಳವಣಿಗೆ ಬಗ್ಗೆ ಭಾರತ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. ಭಾರತೀಯ ಅಧಿಕಾರಿಗಳಿಗೆ ಈ ಬೆಳವಣಿಗೆಯ ಅರಿವು ಇದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಈ ಹಿಂದೆಯೂ ಚೀನಾ ಮಾಡಿದ ಮರು ನಾಮಕರಣವನ್ನು ಭಾರತ ತಿರಸ್ಕರಿಸಿತ್ತು. ಈ ಈಶಾನ್ಯ ರಾಜ್ಯ ಭಾರತದ ಅವಿಭಾಜ್ಯ ಅಂಗ; ಅದನ್ನು ಪ್ರತ್ಯೇಕಿಸಲಾಗದು ಎಂದು ಭಾರತ ಸ್ಪಷ್ಟಪಡಿಸಿತ್ತು.

Similar News