ಜೆರುಸಲೇಂನಲ್ಲಿ ಮುಂದುವರಿದ ಹಿಂಸಾಚಾರ 6 ಮಂದಿಗೆ ಗಾಯ
Update: 2023-04-06 22:44 IST
ಜೆರುಸಲೇಂ, ಎ.6: ಜೆರುಸಲೇಂನ ಓಲ್ಡ್ ಸಿಟಿಯಲ್ಲಿರುವ ಅಲ್-ಅಕ್ಸಾ ಮಸೀದಿಯ ಆವರಣದಲ್ಲಿ ಇಸ್ರೇಲ್ ಸೇನೆಯ ಕಾರ್ಯಾಚರಣೆಯ ಬಳಿಕ ಜೆರುಸಲೇಂನಲ್ಲಿ ಸತತ 2ನೇ ದಿನವಾದ ಗುರುವಾರವೂ ಹಿಂಸಾಚಾರ ಮುಂದುವರಿದಿದ್ದು ಕನಿಷ್ಟ 6 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇಸ್ರೇಲ್ ಸೇನೆಯ ಕಾರ್ಯಾಚರಣೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಚದುರಿಸಲು ಪೊಲೀಸರು ಸ್ಟನ್ ಗ್ರೆನೇಡ್ ಪ್ರಯೋಗಿಸಿದರು ಹಾಗೂ ರಬ್ಬರ್ ಬುಲೆಟ್ ಬಳಸಿದರು ಎಂದು ವರದಿಯಾಗಿದೆ. ಹಿಂಸಾಚಾರದಲ್ಲಿ ಕನಿಷ್ಟ 6 ಮಂದಿ ಗಾಯಗೊಂಡಿರುವುದಾಗಿ ಫೆಲೆಸ್ತೀನಿಯನ್ ರೆಡ್ಕ್ರೆಸೆಂಟ್ ವರದಿ ಮಾಡಿದೆ.
ಕಾನೂನನ್ನು ಉಲ್ಲಂಘಿಸಿದ ಹಲವು ಯುವಕರು ಅಧಿಕಾರಿಗಳತ್ತ ಕಲ್ಲು ಹಾಗೂ ಇತರ ವಸ್ತುಗಳನ್ನು ಎಸೆದಾಗ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರು ಕ್ರಮ ಕೈಗೊಳ್ಳುವುದು ಅನಿವಾರ್ಯವಾಯಿತು ಎಂದು ಇಸ್ರೇಲ್ ಸೇನೆ ಹೇಳಿದೆ. ಇಸ್ರೇಲ್ ಸೇನೆಯ ಭೀಭತ್ಸ್ಯ ಆಕ್ರಮಣಗಳ ವೀಡಿಯೊ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.