ಆರ್ ಸಿಬಿ ವಿರುದ್ಧ ಪಂದ್ಯದಲ್ಲಿ ಹೆಲ್ಮೆಟ್ ಎಸೆದು ಸಂಭ್ರಮಾಚರಣೆ: ಅವೇಶ್ ಖಾನ್ ಗೆ ಛೀಮಾರಿ

Update: 2023-04-11 05:15 GMT

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಮವಾರ  ನಡೆದ 15ನೇ ಐಪಿಎಲ್  ಪಂದ್ಯದ  ಕೊನೆಯ ಓವರ್‌ನಲ್ಲಿ ತಂಡದ ರೋಚಕ ಜಯದ ನಂತರ ಲಕ್ನೊ ಸೂಪರ್ ಜೈಂಟ್ಸ್ ವೇಗದ ಬೌಲರ್ ಅವೇಶ್ ಖಾನ್ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ವಾಗ್ದಂಡನೆಗೆ ಗುರಿಯಾದರು. ಸ್ಲೋ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ  ಆರ್ ಸಿಬಿಗೆ ದಂಡ ವಿಧಿಸಲಾಯಿತು.

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ  ಲಕ್ನೊ ತಂಡ ಕೊನೆಯ  ಓವರ್ ನಲ್ಲಿ  ಆರ್‌ಸಿಬಿಯನ್ನು 1 ವಿಕೆಟ್  ಅಂತರದಿಂದ ಸೋಲಿಸಿತು. 420 ಕ್ಕೂ ಹೆಚ್ಚು ರನ್ ಹರಿದಿದ್ದು,  27 ಸಿಕ್ಸರ್‌ಗಳು ಸಿಡಿಯಲ್ಪಟ್ದವು. ಆದರೆ ಅಂತಿಮವಾಗಿ  ಸಾವಿರಾರು ಆರ್‌ಸಿಬಿ ಅಭಿಮಾನಿಗಳು ತಂಡ ಸೋತಿರುವುದಕ್ಕೆ ನಿರಾಸೆಗೊಂಡರು.

ಗೆಲ್ಲಲು 213 ರನ್ ಗುರಿ ಪಡೆದಿದ್ದ ಲಕ್ನೊ ತಂಡ ಆರಂಭಿಕ ಕುಸಿತದಿಂದ ಚೇತರಿಸಿಕೊಂಡಿತು.  ಮಾರ್ಕಸ್ ಸ್ಟೋನಿಸ್‌  30 ಎಸೆತಗಳಲ್ಲಿ 65 ರನ್ ಮತ್ತು ನಿಕೋಲಸ್ ಪೂರನ್‌ 19 ಎಸೆತಗಳಲ್ಲಿ 62 ರನ್‌ ಗಳಿಸಿದರು. ಆದಾಗ್ಯೂ ಪಂದ್ಯವು  ಅಂತಿಮ ಓವರ್‌ಗೆ ವಿಸ್ತರಣೆಯಾಯಿತು.

ಲಕ್ನೊ ಗೆಲುವಿಗೆ ಅಂತಿಮ ಎಸೆತದಲ್ಲಿ ಒಂದು ರನ್ ಅಗತ್ಯವಿತ್ತು.ಹರ್ಷಲ್ ಪಟೇಲ್ ಬೌಲಿಂಗ್ ನಲ್ಲಿ   ಆರ್ ಸಿಬಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಸ್ಟಂಪ್ ಔಟ್ ಮಾಡುವ ಅವಕಾಶ ಕಳೆದುಕೊಂಡ ಕಾರಣ ರವಿ ಬಿಷ್ನೋಯಿ ಹಾಗೂ ಅವೇಶ್ ಖಾನ್ 1 ರನ್ ಪೂರೈಸಲು ಯಶಸ್ವಿಯಾದರು.

ತಂಡವು ರೋಚಕ ಜಯ ಸಾಧಿಸಿದ ನಂತರ    ಅವೇಶ್   ತನ್ನ ಹೆಲ್ಮೆಟ್ ಅನ್ನು ಮೈದಾನದ ಮೇಲೆ ಎಸೆದು ವಿಜಯೋತ್ಸವ ಆಚರಿಸಿದರು. ಇದು ನೀತಿ ಸಂಹಿತೆ ಉಲ್ಲಂಘನೆಗೆ ಕಾರಣವಾಗಿದೆ.

"ಲಕ್ನೊ ಸೂಪರ್ ಜೈಂಟ್ಸ್‌ನ ಆಟಗಾರ  ಅವೇಶ್ ಖಾನ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ವಾಗ್ದಂಡನೆಗೆ ಗುರಿಯಾಗಿದ್ದಾರೆ. ಅವೇಶ್ ಅವರು IPL ನ ನೀತಿ ಸಂಹಿತೆಯ 2.2 ಹಂತ 1 ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಹಾಗೂ  ವಾಗ್ದಂಡನೆಯನ್ನು  ಸ್ವೀಕರಿಸಿದ್ದಾರೆ. ನೀತಿ ಸಂಹಿತೆಯ ಹಂತ 1 ಉಲ್ಲಂಘನೆಗಾಗಿ ಪಂದ್ಯದ ತೀರ್ಪುಗಾರರ ನಿರ್ಧಾರ ಅಂತಿಮ” ಎಂದು ಐಪಿಎಲ್ ಹೇಳಿಕೆ ತಿಳಿಸಿದೆ.

ಲಕ್ನೊ ವಿರುದ್ಧ ಪಂದ್ಯದ ವೇಳೆ ನಿಧಾನಗತಿಯ ಬೌಲಿಂಗ್ ಕಾಯ್ದುಕೊಂಡಿದ್ದಕ್ಕೆ ಆರ್ ಸಿಬಿ ನಾಯಕ ಪ್ಲೆಸಿಸ್ ಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.

Similar News