×
Ad

ಎರಡನೇ ಶೀತಲ ಸಮರ ತಪ್ಪಿಸುವುದು ಎಲ್ಲರ ಹೊಣೆ: ಐಎಂಎಫ್ ಮುಖ್ಯಸ್ಥೆ

Update: 2023-04-14 23:05 IST

ವಾಷಿಂಗ್ಟನ್, ಎ.14: ಹೆಚ್ಚುತ್ತಿರುವ ಜಾಗತಿಕ ವ್ಯಾಪಾರ ವಿಘಟನೆಯ ದುಬಾರಿ ಪರಿಣಾಮಗಳನ್ನು ಮತ್ತು ಎರಡನೇ ಶೀತಲ ಸಮರವನ್ನು ತಪ್ಪಿಸುವ ನಿಟ್ಟಿನಲ್ಲಿ ದೇಶಗಳು ಇನ್ನಷ್ಟು ಕಾರ್ಯಪ್ರವೃತ್ತರಾಗುವ ಅಗತ್ಯವಿದೆ ಎಂದು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್)ನ ಆಡಳಿತ ನಿರ್ದೇಶಕಿ ಕ್ರಿಸ್ತಲಿನಾ ಜಾರ್ಜಿಯೆವಾ ಹೇಳಿದ್ದಾರೆ.

‌ಶೀತಲ ಸಮರದ ಪರಿಣಾಮಗಳು ಏನೆಂದು ನನಗೂ ತಿಳಿದಿದೆ. ಇದು  ಪ್ರತಿಭೆಯ ನಷ್ಟ, ಜಗತ್ತಿಗೆ ಕೊಡುಗೆಯ ನಷ್ಟಕ್ಕೆ ಕಾರಣವಾಗುತ್ತದೆ. ಇದು ಮರುಕಳಿಸುವುದನ್ನು ನಾನು ಬಯಸುವುದಿಲ್ಲ. ವ್ಯಾಪಾರ ವಿಘಟನೆ ಇರುವುದನ್ನು ಜಗತ್ತು ತರ್ಕಬದ್ಧವಾಗಿ ಒಪ್ಪಿಕೊಳ್ಳಬೇಕು. ವಿಶ್ವಬ್ಯಾಂಕ್ ಮತ್ತು ಐಎಂಎಫ್ನಂತಹ ಬಹುಪಕ್ಷೀಯ ಸಂಸ್ಥೆಗಳು ತೀವ್ರ ಆರ್ಥಿಕ ಪರಿಣಾಮಗಳೊಂದಿಗೆ ಜಗತ್ತು ವಿಭಿನ್ನ ಬಣಗಳಾಗಿ ಹಂಚಿಹೋಗುವುದನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದವರು ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

ತಮ್ಮ ಪ್ರಜೆಗಳ ಹಿತಾಸಕ್ತಿಗಳನ್ನು  ರಕ್ಷಿಸಲು ನೀತಿನಿರೂಪಕರು ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ. ನಾವು ಹೆಚ್ಚು ತರ್ಕಬದ್ಧರಾಗಿರಲು ವಿಫಲವಾದರೆ ಎಲ್ಲೆಡೆಯ ಜನರಿಗೆ ಸಮಸ್ಯೆಯಾಗಲಿದೆ. ವಿಶ್ವದ ಹಲವು ದೇಶಗಳಲ್ಲಿ ಹಣದುಬ್ಬರದ ಪ್ರಮಾಣ ಅಧಿಕ ಮಟ್ಟದಲ್ಲೇ ಉಳಿದಿದೆ. ಹಣದುಬ್ಬರದ ವಿರುದ್ಧದ ಹೋರಾಟದಲ್ಲಿ ಸೆಂಟ್ರಲ್ ಬ್ಯಾಂಕ್ಗಳು ಸ್ಥಿರವಾಗಿ ನಿಲ್ಲುವುದಾಗಿ ನಾವು ನಿರೀಕ್ಷಿಸುತ್ತೇವೆ. ಸರಕಾರಗಳೂ ತಮ್ಮ ಬಜೆಟ್ ಕೊರತೆಯನ್ನು ಕಡಿಮೆಗೊಳಿಸಲು ಕ್ರಮ ಕೈಗೊಳ್ಳುವ ಅಗತ್ಯವಿದೆ ಮತ್ತು ಮಧ್ಯಮ ಅವಧಿಯಲ್ಲಿ ವಿಶ್ವ ಆರ್ಥಿಕತೆಯ ಬೆಳವಣಿಗೆಯನ್ನು ಸುಧಾರಿಸಲು ಇನ್ನಷ್ಟು ಕೆಲಸ ಮಾಡಬೇಕಿದೆ.

ಅನೇಕ ದೇಶಗಳಲ್ಲಿ ಹಸಿರು ಶಕ್ತಿಯ ಪರಿವರ್ತನೆ, ಡಿಜಿಟಲ್ ರೂಪಾಂತರ ಪ್ರಕ್ರಿಯೆಗೆ ವೇಗ ನೀಡಲು, ವ್ಯಾಪಾರ ವಾತಾವರಣವನ್ನು ಸುಧಾರಿಸಲು ಸದಸ್ಯ ದೇಶಗಳು ಮುಂದಾಗಬೇಕು. ನವೀಕರಿಸಬಹುದಾದ ಶಕ್ತಿ ಮತ್ತು ಹೂಡಿಕೆಗೆ ವರ್ಷಕ್ಕೆ 1 ಟ್ರಿಲಿಯನ್(1 ಲಕ್ಷ ಕೋಟಿ) ಡಾಲರ್ ಮೊತ್ತದ ಅಗತ್ಯವಿದೆ ಎಂದವರು ಹೇಳಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ಮತ್ತು ಉಕ್ರೇನ್ ಮೇಲಿನ ರಶ್ಯದ ಆಕ್ರಮಣದ ಅವಳಿ ಆಘಾತದಿಂದ ತತ್ತರಿಸಿರುವ ಕಡಿಮೆ ಆದಾಯದ ದೇಶಗಳಿಗೆ ಸಾಲ ಸೌಲಭ್ಯಗಳನ್ನು ಮರುಪೂರಣಗೊಳಿಸುವಲ್ಲಿಯೂ ಪ್ರಗತಿ ಸಾಧಿಸಲಾಗಿದೆ. ನಿಧಿ ಮರುಪೂರಣದ  ನಿಟ್ಟಿನಲ್ಲಿ ಐರ್ಲ್ಯಾಂಡ್, ಸೌದಿ ಅರೆಬಿಯಾ, ಬ್ರಿಟನ್, ಪೋರ್ಚುಗಲ್ ಮತ್ತು ಜಪಾನ್ ಗಮನಾರ್ಹ ಪ್ರಮಾಣದ ಹೊಸ ಕೊಡುಗೆಯ ವಾಗ್ದಾನ ನೀಡಿದೆ ಎಂದು ಐಎಂಎಫ್ ಮುಖ್ಯಸ್ಥೆ ಹೇಳಿದ್ದಾರೆ. 

ಈ ವಾರದ ಆರಂಭದಲ್ಲಿ ಬಿಡುಗಡೆಯಾದ ಐಎಂಎಫ್ ವರದಿಯಲ್ಲಿ `ಬ್ರೆಕ್ಸಿಟ್, ಅಮೆರಿಕ-ಚೀನಾ ವ್ಯಾಪಾರ ಸಂಷರ್ಘ ಮತ್ತು ಉಕ್ರೇನ್ ಮೇಲಿನ ರಶ್ಯದ ಆಕ್ರಮಣದಂತಹ ಘಟನೆಗಳ ಪರಿಣಾಮವಾಗಿ ಬೆಳೆಯುತ್ತಿರುವ ವ್ಯಾಪಾರ ವಿಘಟನೆಗಳು ಜಾಗತಿಕ ಆರ್ಥಿಕತೆಯನ್ನು 7%ದಷ್ಟು ಕಡಿಮೆಗೊಳಿಸಬಹುದು' ಎಂದು ಉಲ್ಲೇಖಿಸಲಾಗಿದೆ.

Similar News