ತಪ್ಪಿ ಕಾಲಿಂಗ್‌ಬೆಲ್ ಒತ್ತಿದ್ದ ಕಪ್ಪುವರ್ಣೀಯ ಬಾಲಕನಿಗೆ ಗುಂಡೇಟು: ಆರೋಪಿ ವಿರುದ್ಧ ಹತ್ಯೆ ಪ್ರಯತ್ನದ ದೋಷಾರೋಪಣೆ
ವಾಷಿಂಗ್ಟನ್: ತನ್ನ ಮನೆಯ ಕರೆಗಂಟೆಯನ್ನು ತಪ್ಪಾಗಿ ಬಾರಿಸಿದ ಕಪ್ಪುವರ್ಣೀಯ ಬಾಲಕನ ಮೇಲೆ ಕುಪಿತಗೊಂಡು ಆತನ ಮೇಲೆ ಎರಡು ಬಾರಿ ಗುಂಡು ಹಾರಿಸಿ, ಆತನನ್ನು ಗಂಭೀರವಾಗಿ ಗಾಯಗೊಳಿಸಿದ್ದ 85 ವರ್ಷದ ಬಿಳಿ ವ್ಯಕ್ತಿಯ ಮೇಲೆ ಮಿಸೌರಿ ರಾಜ್ಯದ ವಿಚಾರಣಾಧಿಕಾರಿಯು ಹತ್ಯೆ ಪ್ರಯತ್ನದ ದೋಷಾರೋಪವನ್ನು ಹೊರಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ಕಳೆದ ಗುರುವಾರ ರಾತ್ರಿ ತನ್ನ ಗೆಳೆಯನ ನಿವಾಸದಿಂದ ತನ್ನ ಅವಳಿ ಸಹೋದರರನ್ನು ಕರೆದುಕೊಂಡು ಹೋಗಲು ಬಂದಿದ್ದ ರಾಲ್ಫ್ ಪೌಲ್ ಯಾರ್ಲ್ (16) ಎಂಬ ಕಪ್ಪು ವರ್ಣೀಯ ಬಾಲಕನು ತಪ್ಪಾಗಿ ನೆರೆಮನೆಯ ಕರೆಗಂಟೆ ಬಾರಿಸಿದ್ದ. ಇದರಿಂದ ಕುಪಿತಗೊಂಡಿದ್ದ ಆ ಮನೆಯ ಮಾಲಕ ಆತನತ್ತ ಎರಡು ಸುತ್ತು ಗುಂಡು ಹಾರಿಸಿದ್ದ. ಈ ಪೈಕಿ ಒಂದು ಗುಂಡು ಆತನ ತಲೆಗೆ ಬಡಿದಿತ್ತು. ಈ ಗುಂಡಿನ ದಾಳಿಯಲ್ಲಿ ಆ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾನೆ ಎಂದು ವರದಿಯಾಗಿದೆ.
ಮನೆಯ ಮಾಲಕನನ್ನು 24 ಗಂಟೆಗಳ ಕಾಲ ಪೊಲೀಸ್ ವಶದಲ್ಲಿಟ್ಟುಕೊಂಡರೂ ಆತನ ಮೇಲೆ ಯಾವುದೇ ದೋಷಾರೋಪ ಹೊರಿಸದೆ ಬಿಡುಗಡೆ ಮಾಡಿದ ಕ್ರಮವನ್ನು ಪ್ರತಿಭಟಿಸಿ ಕಳೆದ ವಾರ ಪೂರ್ತಿ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಆದರೆ, ಸೋಮವಾರ ಕ್ಲೇ ಕೌಂಟಿ ವಿಚಾರಣಾಧಿಕಾರಿಯು ಮನೆಯ ಮಾಲಕನಾದ ಆ್ಯಂಡ್ರ್ಯೂ ಲೆಸ್ಟರ್ (85) ಎಂಬಾತನ ವಿರುದ್ಧ ಹತ್ಯಾ ಪ್ರಯತ್ನ ಹಾಗೂ ಸಶಸ್ತ್ರ ಅಪರಾಧ ಕ್ರಿಯೆ ಆರೋಪಗಳಡಿ ದೋಷಾರೋಪ ಹೊರಿಸಲಾಗಿದೆ ಎಂದು ಪ್ರಕಟಿಸಿದ್ದಾರೆ. ಮನೆಯ ಮಾಲಕನ ಬಿಡುಗಡೆಗೆ 2,00,000 ಡಾಲರ್ ಜಾಮೀನು ಮೊತ್ತವನ್ನು ನಿಗದಿಗೊಳಿಸಲಾಗಿದೆ.
ಘಟನೆಯ ಕುರಿತು GoFundMe ಅಭಿಯಾನಕ್ಕೆ ಪ್ರತಿಕ್ರಿಯಿಸಿರುವ ಬಾಲಕನ ಚಿಕ್ಕಮ್ಮ ಫೇತ್ ಸ್ಪೂನ್‌ಮೂರ್, ತನ್ನ ಅಕ್ಕನ ಮಗನು ದೇವರ ಕೊಡುಗೆಯ ವಿದ್ಯಾರ್ಥಿಯಾಗಿದ್ದು, ರಾಸಾಯನಿಕ ತಂತ್ರಜ್ಞಾನ ಕುರಿತು ವ್ಯಾಸಂಗ ಮಾಡಲು ಬಯಸಿದ್ದ ಎಂದು ಹೇಳಿದ್ದಾರೆ.