ಆರ್ ಸಿಬಿ ಆಂತರಿಕ ಮಾಹಿತಿ ಕೇಳಿದ ಅಪರಿಚಿತ ವ್ಯಕ್ತಿ : ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ಸಿರಾಜ್ ದೂರು

Update: 2023-04-19 07:52 GMT

ಹೊಸದಿಲ್ಲಿ: ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರಲ್ಲಿ ಎಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ಭಾರತದ ಸ್ಟಾರ್  ವೇಗಿ ಮುಹಮ್ಮದ್ ಸಿರಾಜ್(Mohammed Siraj) ಬಿಸಿಸಿಐನ ಭ್ರಷ್ಟಾಚಾರ ವಿರೋಧಿ ಘಟಕಕ್ಕೆ (ಎಸಿಯು) ದೂರು ನೀಡಿದ್ದಾರೆ.

ಚಾಲಕನೆಂದು ಹೇಳಿಕೊಂಡಿರುವ  ಅಪರಿಚಿತ ವ್ಯಕ್ತಿಯೊಬ್ಬ ಸಿರಾಜ್ ರನ್ನು  ಸಂಪರ್ಕಿಸಿ  ಆರ್‌ಸಿಬಿ ತಂಡದ  ಆಂತರಿಕ ಮಾಹಿತಿಯನ್ನು ಕೇಳಿದ್ದಾನೆ ಎಂದು ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ.

ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಕಠಿಣ ನೀತಿ ಸಂಹಿತೆಯನ್ನು ಹೊಂದಿದೆ. ಒಬ್ಬ ಆಟಗಾರ ಅಥವಾ ಅಧಿಕಾರಿಯು ಬುಕ್ಕಿಗಳು ತಮ್ಮನ್ನು ಸಂಪರ್ಕಿಸಿದ ಕುರಿತು   ಮಾಹಿತಿ ನೀಡಲು ವಿಫಲವಾದರೆ ಅವರು ಕೂಡ ಶಿಕ್ಷೆಗೆ ಗುರಿಯಾಗುತ್ತಾರೆ.

ಪಿಟಿಐ ವರದಿಯ ಪ್ರಕಾರ, ಹಿಂದಿನ ಐಪಿಎಲ್ ಪಂದ್ಯದಲ್ಲಿ ಸಾಕಷ್ಟು ಹಣವನ್ನು ಕಳೆದುಕೊಂಡ ನಂತರ ಅಪರಿಚಿತ ವ್ಯಕ್ತಿ ಆರ್ ಸಿಬಿ ತಂಡದ ಬಗ್ಗೆ ಸುದ್ದಿ ಬಯಸಿದ್ದ. ಭಾರತದ ವೇಗಿ ಸಿರಾಜ್ ಗೆ   ಕರೆ ಬಂದಿತ್ತು ಹಾಗೂ  ತಕ್ಷಣವೇ ಎಸಿಯು ಅಧಿಕಾರಿಗಳಿಗೆ ವಿಷಯವನ್ನು ವರದಿ ಮಾಡಿದರು.

 ‘‘ಸಿರಾಜ್ ಬಳಿ ಬಂದಿದ್ದು ಬುಕ್ಕಿ ಅಲ್ಲ, ಹೈದರಾಬಾದ್ ಮೂಲದ ಚಾಲಕನೊಬ್ಬ ಮ್ಯಾಚ್ ಬೆಟ್ಟಿಂಗ್ ವ್ಯಸನಿಯಾಗಿದ್ದು, ಅಪಾರ ಹಣ ಕಳೆದುಕೊಂಡಿದ್ದು, ಆಂತರಿಕ ಮಾಹಿತಿಗಾಗಿ ಸಿರಾಜ್ ಅವರನ್ನು ಸಂಪರ್ಕಿಸಿದ್ದಾನೆ’’ ಎಂದು ವರದಿಯಾಗಿದೆ.

"ಸಿರಾಜ್ ಈ ವಿಚಾರವನ್ನು ತಕ್ಷಣವೇ ವರದಿ ಮಾಡಿದ್ದಾರೆ. ಕಾನೂನು ಜಾರಿ ಅಧಿಕಾರಿಗಳು ವ್ಯಕ್ತಿಯನ್ನು ಬಂಧಿಸಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ" ಎಂದು  BCCI ಮೂಲವು PTI ಗೆ ತಿಳಿಸಿದರು.

Similar News