×
Ad

​ದಾಖಲೆ ಮಟ್ಟಕ್ಕೇರಿದ ಮಿಲಿಟರಿ ವೆಚ್ಚ: ವರದಿ

Update: 2023-04-24 23:05 IST

ಸ್ಟಾಕ್‍ಹೋಮ್, ಎ.24: ಜಾಗತಿಕ ಮಿಲಿಟರಿ ವೆಚ್ಚವು 2022ರಲ್ಲಿ ಸಾರ್ವಕಾಲಿಕ ಗರಿಷ್ಟ ಮಟ್ಟಕ್ಕೆ ತಲುಪಿದೆ ಎಂದು `ದಿ ಸ್ಟಾಕ್‍ಹೋಮ್ ಇಂಟರ್‍ನ್ಯಾಷನಲ್ ಪೀಸ್ ರಿಸರ್ಚ್ ಇನ್‍ಸ್ಟಿಟ್ಯೂಟ್(ಎಸ್‍ಐಪಿಆರ್‍ಐ) ವರದಿ ಮಾಡಿದೆ. 

ಉಕ್ರೇನ್‍ನಲ್ಲಿ ನಡೆಯುತ್ತಿರುವ ಯುದ್ಧವು ಯುರೋಪ್‍ನಲ್ಲಿ ಶಸ್ತ್ರಾಸ್ತ್ರ ವೆಚ್ಚದಲ್ಲಿನ ಬೃಹತ್ ಹೆಚ್ಚಳಕ್ಕೆ ಪ್ರಧಾನ ಕಾರಣವಾಗಿದೆ. ಮಿಲಿಟರಿ ವೆಚ್ಚವು 2022ರಲ್ಲಿ 2240 ಶತಕೋಟಿ ಡಾಲರ್‍ಗೆ ಏರಿಕೆಯಾಗಿದ್ದು ಇದು ಸಾರ್ವಕಾಲಿಕ ದಾಖಲೆಯಾಗಿದೆ ಎಂದು ವರದಿ ಹೇಳಿದೆ. ಉಕ್ರೇನ್‍ನಲ್ಲಿನ ಯುದ್ಧ ಮಾತ್ರವಲ್ಲ, ಪೂರ್ವ ಏಶ್ಯಾದಲ್ಲಿ ಅಮೆರಿಕ ಮತ್ತು ಚೀನಾದ ನಡುವಿನ ವಿವಾದ ಇತ್ಯರ್ಥಗೊಳ್ಳದೆ ಇನ್ನಷ್ಟು ಉಲ್ಬಣಿಸಿರುವುದೂ ಶಸ್ತ್ರಾಸ್ತ್ರ ವೆಚ್ಚದ ಹೆಚ್ಚಳಕ್ಕೆ ಕಾರಣವಾಗಿದೆ.

ಕಳೆದ ಫೆಬ್ರವರಿಯಲ್ಲಿ ಉಕ್ರೇನ್ ಮೇಲಿನ ರಶ್ಯದ ಆಕ್ರಮಣ ಆರಂಭವಾದಂದಿನಿಂದ ಎಲ್ಲಾ ದೇಶಗಳೂ ತಮ್ಮ ರಕ್ಷಣಾ ವೆಚ್ಚಕ್ಕೆ ಹೆಚ್ಚುವರಿ ಮೊತ್ತ ವಿನಿಯೋಗಿಸಲು ಅವಸರ ತೋರುತ್ತಿರುವುದು ರಕ್ಷಣಾ ವೆಚ್ಚದ ಹೆಚ್ಚಳಕ್ಕೆ ಮತ್ತೊಂದು ಕಾರಣವಾಗಿದೆ  ಎಂದು ವರದಿಯ ಸಹ ಲೇಖಕ ನ್ಯಾನ್ ಟಿಯಾನ್‍ರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

2022ರಲ್ಲಿ ಅತ್ಯಧಿಕ ವೆಚ್ಚ ಮಾಡಿದ 15 ದೇಶಗಳ ಖಾತೆಗೆ ಜಾಗತಿಕ ಮಿಲಿಟರಿ ವೆಚ್ಚದ 82%ದಷ್ಟು ಅಥವಾ 1842 ಶತಕೋಟಿ ಡಾಲರ್‍ನಷ್ಟು ವೆಚ್ಚ ಜಮೆಯಾಗುತ್ತದೆ. ಅಮೆರಿಕ ಮತ್ತು ಚೀನಾ ಅಗ್ರ 2 ಸ್ಥಾನದಲ್ಲಿದ್ದು ಕ್ರಮವಾಗಿ 39% ಮತ್ತು 13% ವೆಚ್ಚ ಮಾಡಿವೆ. ಉಕ್ರೇನ್‍ನ ಮಿಲಿಟರಿ ವೆಚ್ಚವು 2022ರಲ್ಲಿ 640%ದಷ್ಟು ಏರಿಕೆಯಾಗಿದೆ. 2022ರಲ್ಲಿ ಅಮೆರಿಕದ ಒಟ್ಟು ವೆಚ್ಚದಲ್ಲಿ 2.3%ದಷ್ಟು ಮಿಲಿಟರಿ ವೆಚ್ಚವಾಗಿದೆ. ರಶ್ಯದ ಮಿಲಿಟರಿ ವೆಚ್ಚವೂ 2022ರಲ್ಲಿ 9.2%ದಷ್ಟು ಹೆಚ್ಚಿದೆ ಎಂದು ವರದಿ ಹೇಳಿದೆ.

Similar News