ಸುಡಾನ್: ಕದನವಿರಾಮ ವಿಸ್ತರಣೆಗೆ ಸೇನೆ ಸಮ್ಮತಿ
ಖಾರ್ಟಮ್, ಎ.27: ಸೇನಾಪಡೆ ಮತ್ತು ಅರೆಸೇನಾ ಪಡೆಯ ನಡುವಿನ ಭೀಕರ ಸಂಘರ್ಷ ಭುಗಿಲೆದ್ದಿರುವ ಸುಡಾನ್ನಲ್ಲಿ ಕಳೆದ ಮಂಗಳವಾರ ಜಾರಿಗೆ ಬಂದಿದ್ದ 72 ಗಂಟೆಗಳ ಕದನ ವಿರಾಮ ಗುರುವಾರ ರಾತ್ರಿ ಅಂತ್ಯಗೊಳ್ಳಲಿರುವ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಸಮುದಾಯದ ಆಗ್ರಹಕ್ಕೆ ಮಣಿದಿರುವ ಸುಡಾನ್ ಸೇನೆ ಯುದ್ಧವಿರಾಮವನ್ನು ಮತ್ತೆ ವಿಸ್ತರಿಸಲು ಸಮ್ಮತಿಸಿದೆ ಎಂದು ವರದಿಯಾಗಿದೆ.
ಮಂಗಳವಾರ ಕದನ ವಿರಾಮ ಜಾರಿಗೆ ಬಂದಿದ್ದರೂ ಎರಡೂ ಪಡೆಯ ನಡುವಿನ ಸಂಘರ್ಷ ಮುಂದುವರಿದಿತ್ತು. ಕದನ ವಿರಾಮದ ಸಂದರ್ಭದಲ್ಲಿ ಹಲವು ದೇಶಗಳು ಸಂಘರ್ಷಪೀಡಿತ ದೇಶದಲ್ಲಿ ಇಕ್ಕಟ್ಟಿಗೆ ಸಿಲುಕಿದ್ದ ತಮ್ಮ ನಾಗರಿಕರನ್ನು ಸ್ಥಳಾಂತರಿಸುವ ಪ್ರಕ್ರಿಯೆ ಆರಂಭಿಸಿವೆ. ಆದರೆ ಸಂಘರ್ಷ ಮುಂದುವರಿದಿರುವುದರಿಂದ ತೆರವು ಕಾರ್ಯಾಚರಣೆಗೆ ಅಡ್ಡಿಯಾಗಿದ್ದು ಕದನ ವಿರಾಮವನ್ನು ಮತ್ತೆ 3 ದಿನ ವಿಸ್ತರಿಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಅಂತರಾಷ್ಟ್ರೀಯ ಸಮುದಾಯ ಆಗ್ರಹಿಸಿತ್ತು. ಸಂಘರ್ಷ ದೇಶದಾದ್ಯಂತ ವ್ಯಾಪಿಸಿರುವುದರಿಂದ ಹಲವು ಪ್ರದೇಶಗಳಲ್ಲಿ ಆಹಾರ ಮತ್ತು ನೀರಿನ ಕೊರತೆ ಎದುರಾಗಿದ್ದು ಅಗತ್ಯದ ಆರೋಗ್ಯ ಸೇವೆಗೂ ತೊಡಕಾಗಿದೆ.
ಎಪ್ರಿಲ್ ಮಧ್ಯಭಾಗದಿಂದ ಭುಗಿಲೆದ್ದಿರುವ ಸಂಘರ್ಷದಲ್ಲಿ ಇದುವರೆಗೆ ಕನಿಷ್ಟ 459 ಮಂದಿ ಮೃತರಾಗಿದ್ದು 4000ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಬಗ್ಗೆ ಅಧಿಕೃತ ಮಾಹಿತಿ ಲಭಿಸಿದೆ. ಸಾವು-ನೋವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೋಸ್ ಅಧನಾಮ್ ಘೆಬ್ರಯೇಸಸ್ ಹೇಳಿದ್ದಾರೆ.
ಈ ಮಧ್ಯೆ, ಕದನವಿರಾಮ ವಿಸ್ತರಣೆ ಹಾಗೂ ಎರಡು ಪಡೆಗಳ ನಡುವೆ ಸಂಧಾನ ಮಾತುಕತೆಗೆ ಅವಕಾಶ ಕಲ್ಪಿಸುವ ಪ್ರಸ್ತಾವನೆಯನ್ನು ದಕ್ಷಿಣ ಸುಡಾನ್, ಕೆನ್ಯಾ ಮತ್ತು ಡಿಬೌಟಿಯ ಅಧ್ಯಕ್ಷರು ಮುಂದಿರಿಸಿದ್ದು ಇದಕ್ಕೆ ಸಮ್ಮತಿಸಿರುವುದಾಗಿ ಸೇನೆ ಹೇಳಿದೆ. ಆದರೆ ಅರೆಸೇನಾ ಪಡೆಯ ಭಾಗವಾಗಿರುವ ಕ್ಷಿಪ್ರ ನೆರವು ಪಡೆ(ಆರ್ಎಸ್ಎಫ್)ನಿಂದ ಇದಕ್ಕೆ ಪೂರಕ ಸ್ಪಂದನೆ ಸಿಕ್ಕಿಲ್ಲ ಎಂದು `ರಾಯ್ಟರ್ಸ್' ವರದಿ ಮಾಡಿದೆ.