×
Ad

ಪೊಲೀಸರು ಕುಡಿದು ಬಂದು ನಮ್ಮನ್ನು ನಿಂದಿಸಿದರು: ವಿನೇಶ್ ಫೋಗಟ್ ಆರೋಪ

'ಇಂತಹ ದಿನ ನೋಡಲು ನಾವು ದೇಶಕ್ಕಾಗಿ ಪದಕಗಳನ್ನು ಗೆದ್ದಿದ್ದೇವೆಯೇ?

Update: 2023-05-04 10:16 IST

ಹೊಸದಿಲ್ಲಿ: ನಾವು  ರಾತ್ರಿ ತಂಗಲು ಮಡಚಬಹುದಾದ ಮಂಚಗಳನ್ನು ತರಲು ಬಯಸಿದಾಗ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಕುಡಿದು ಬಂದಿದ್ದ ದಿಲ್ಲಿ ಪೊಲೀಸರ ಗುಂಪೊಂದು ತಮ್ಮ ಮೇಲೆ ಹಲ್ಲೆ ನಡೆಸಿದೆ ಎಂದು  ಭಾರತದ ಅಗ್ರ ಕುಸ್ತಿಪಟುಗಳಲ್ಲಿ ಒಬ್ಬರಾದ ವಿನೇಶ್ ಫೋಗಟ್(Vinesh Phogat) ಆರೋಪಿಸಿದ್ದಾರೆ.

ಫೋಗಟ್ ಅವರು  ಬಜರಂಗ್ ಪೂನಿಯಾ ಮತ್ತು ಸಾಕ್ಷಿ ಮಲಿಕ್ ಅವರೊಂದಿಗೆ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

 ಪೊಲೀಸ್ ಅಧಿಕಾರಿಗಳು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಲು ಆರಂಭಿಸಿದರು ಹಾಗೂ  ಮಹಿಳಾ ಕುಸ್ತಿಪಟುಗಳನ್ನು ನಿಂದಿಸಿದರು ಎಂದು ಕುಸ್ತಿಪಟುಗಳು ಹೇಳಿದ್ದಾರೆ.

 “ಮಳೆಯಿಂದಾಗಿ ಹಾಸಿಗೆಗಳು ಒದ್ದೆಯಾಗಿದ್ದವು., ಆದ್ದರಿಂದ ನಾವು ಮಲಗಲು ಮಡಚುವ ಮಂಚಗಳನ್ನು ತರುತ್ತಿದ್ದೆವು, ಆದರೆ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ. ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ನಿಂದಿಸಿದ ಪೊಲೀಸ್ ಅಧಿಕಾರಿ ಧರೆಮೇಂದ್ರ ಅವರು ನಮ್ಮೊಂದಿಗೆ ಜಗಳವಾಡಿದರು'' ಎಂದು ಮಾಜಿ ಕುಸ್ತಿಪಟು ರಾಜ್‌ವೀರ್ ಪಿಟಿಐಗೆ ತಿಳಿಸಿದ್ದಾರೆ.

ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ  ವಿನೇಶ್ ಫೋಗಟ್ ಅವರು ಪೊಲೀಸರ ಅನುಚಿತ ನಡವಳಿಕೆಯ ಬಗ್ಗೆ ಆಘಾತ ಮತ್ತು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ, ನಾವು  ಅಪರಾಧಿಗಳಲ್ಲ ಹಾಗೂ ನಾವು  ಅಂತಹ ಅಗೌರವಕ್ಕೆ ಅರ್ಹರಲ್ಲ ಎಂದು ಹೇಳಿದ್ದಾರೆ.

"ನೀವು ನಮ್ಮನ್ನು ಕೊಲ್ಲಲು ಬಯಸಿದರೆ, ನಮ್ಮನ್ನು ಕೊಲ್ಲಿ.  ಇಂತಹ  ದಿನ ನೋಡಲು ನಾವು ದೇಶಕ್ಕಾಗಿ ಪದಕಗಳನ್ನು ಗೆದ್ದಿದ್ದೇವೆಯೇ? ನಾವು ನಮ್ಮ ಆಹಾರವನ್ನು ಸಹ ತಿನ್ನಲಿಲ್ಲ. ಪ್ರತಿಯೊಬ್ಬ ಪುರುಷನಿಗೆ ಮಹಿಳೆಯರನ್ನು ನಿಂದಿಸುವ ಹಕ್ಕಿದೆಯೇ? ಈ ಪೊಲೀಸರು ಬಂದೂಕು ಹಿಡಿದಿದ್ದಾರೆ, ಅವರು ನಮ್ಮನ್ನು ಕೊಲ್ಲಬಹುದು" ಎಂದು ಕಣ್ಣೀರಿಡುತ್ತಾ ಫೋಗಟ್ ಹೇಳಿದ್ದಾರೆ.

ಭಾವುಕರಾಗಿದ್ದ  ಫೋಗಟ್, ಮಹಿಳಾ ಪೊಲೀಸ್ ಅಧಿಕಾರಿಗಳ ಗೈರುಹಾಜರಿಯನ್ನು ಪ್ರಶ್ನಿಸಿದರು “ಮಹಿಳಾ ಪೊಲೀಸ್ ಅಧಿಕಾರಿಗಳು ಎಲ್ಲಿದ್ದ್ದಾರೆ? ಪುರುಷ ಅಧಿಕಾರಿಗಳು ನಮ್ಮನ್ನು ಹೀಗೆ ತಳ್ಳುವುದು ಸರಿಯೇ? ನಾವು ಅಪರಾಧಿಗಳಲ್ಲ. ನಮ್ಮನ್ನು ಆ ರೀತಿ ನಡೆಸಿಕೊಳ್ಳಬಾರದಿತ್ತು ಎಂದರು.

ಪ್ರತಿಭಟನಾ ಸ್ಥಳದಲ್ಲಿ ತಡರಾತ್ರಿ ನಡೆದ ವಾಗ್ವಾದದ ಬಗ್ಗೆ ಪ್ರತಿಕ್ರಿಯಿಸಿದ ದಿಲ್ಲಿ ಪೊಲೀಸರು, ಕುಸ್ತಿಪಟುಗಳ ಬೆಂಬಲಿಗರು ಹಾಸಿಗೆಗಳನ್ನು ತೆಗೆದುಕೊಳ್ಳದಂತೆ ತಡೆದ ನಂತರ ಗಲಾಟೆ ನಡೆಯಿತು. ಹಾಸಿಗೆ ತೆಗೆದುಕೊಳ್ಳಲು  ಅವರಿಗೆ ಅವಕಾಶ ಇರಲಿಲ್ಲ ಎಂದರು.

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸೋಮನಾಥ್ ಭಾರ್ತಿ ಅವರು ಅನುಮತಿಯಿಲ್ಲದೆ ಮಡಿಚುವ ಹಾಸಿಗೆಗಳೊಂದಿಗೆ ಸ್ಥಳಕ್ಕೆ ಬಂದಿದ್ದಾರೆ ಎಂದು ಸುದ್ದಿ ಸಂಸ್ಥೆ ANI ಯೊಂದಿಗೆ ಮಾತನಾಡಿದ ಪೊಲೀಸ್ ಉಪ ಆಯುಕ್ತ ಪ್ರಣವ್ ತಾಯಲ್ ಹೇಳಿದ್ದಾರೆ.

Similar News