ಕೊಹ್ಲಿ, ರಿಚರ್ಡ್ಸ್ ದಾಖಲೆ ಮುರಿದ ಬಾಬರ್ ಅಝಂ
ಕರಾಚಿ: ಏಕ ದಿನ ಕ್ರಿಕೆಟ್ ಪಂದ್ಯದ ಇತಿಹಾಸದಲ್ಲಿ ಅತ್ಯಂತ ವೇಗವಾಗಿ 5 ಸಾವಿರ ರನ್ ಪೂರೈಸಿದ ಆಟಗಾರ ಎಂಬ ದಾಖಲೆಗೆ ಪಾಕಿಸ್ತಾನದ ಸ್ಫೋಟಕ ಬ್ಯಾಟ್ಸ್‌ಮನ್ ಬಾಬರ್ ಅಝಂ ಪಾತ್ರರಾಗಿದ್ದಾರೆ. ಶುಕ್ರವಾರ ಇಲ್ಲಿನ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಕೇವಲ 107 ಎಸೆತಗಳಲ್ಲಿ 117 ರನ್ ಸಿಡಿಸಿದ ಬಾಬರ್ ಈ ವಿಶಿಷ್ಟ ದಾಖಲೆಗೆ ಪಾತ್ರರಾದರು.
ಬಾಬರ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 334 ರನ್ ಗಳಿಸಿದ ಪಾಕಿಸ್ತಾನ ಈ ಪಂದ್ಯವನ್ನು 102 ರನ್‌ಗಳ ಅಗಾಧ ಅಂತರದಿಂದ ಗೆದ್ದುಕೊಂಡಿತು. ತಮ್ಮ 99ನೇ ಪಂದ್ಯದ 97ನೇ ಇನಿಂಗ್ಸ್‌ನಲ್ಲಿ 19 ರನ್ ಗಳಿಸಿದಾಗ ಬಾಬರ್ 5 ಸಾವಿರ ರನ್‌ಗಳ ಗಡಿ ದಾಟಿದರು. ಇದಕ್ಕೂ ಮುನ್ನ ಹಶೀಮ್ ಆಮ್ಲ ಅವರು 104 ಪಂದ್ಯಗಳ 101 ಇನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲು ದಾಟಿದ್ದರು. ಕೊಹ್ಲಿ ಹಾಗೂ ವಿವಿಯನ್ ರಿಚರ್ಡ್ಸ್ 114 ಇನಿಂಗ್ಸ್‌ಗಳಲ್ಲಿ ಹಾಗೂ ಡೇವಿಡ್ ವಾರ್ನರ್ 115 ಇನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲು ತಲುಪಿದ್ದರು.
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ರ್ಯಾಂಕಿಂಗ್‌ನಲ್ಲಿ ಕಳೆದ ಎರಡು ವರ್ಷಗಳಿಂದ ನಂಬರ್ ವನ್ ಬ್ಯಾಟ್ಸ್‌ಮನ್ ಆಗಿರುವ ಅಝಂ 48ನೇ ಓವರ್‌ನಲ್ಲಿ ಡೀಪ್ ಮಿಡ್‌ವಿಕೆಟ್‌ನಲ್ಲಿ ಕ್ಯಾಚ್ ನೀಡಿ ಔಟ್ ಆಗುವ ಮುನ್ನ 10 ಬೌಂಡರಿ ಸಿಡಿಸಿದರು. ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 5 ಸಾವಿರ ರನ್ ಗಳಿಸಿದ ಪಾಕಿಸ್ತಾನದ 14ನೇ ಆಟಗಾರ ಎಂಬ ಖ್ಯಾತಿಗೂ ಅವರು ಪಾತ್ರರಾದರು. ಏಕದಿನ ಪಂದ್ಯದಲ್ಲಿ 11701 ರನ್ ಗಳಿಸಿದ ಪಾಕಿಸ್ತಾನದ ಮಾಜಿ ಕ್ಯಾಪ್ಟನ್ ಇಮ್ಝಮಾಮ್ ಉಲ್ ಹಕ್ ಅಗ್ರಸ್ಥಾನದಲ್ಲಿದ್ದಾರೆ.
102 ಇನಿಂಗ್ಸ್‌ಗಳಲ್ಲಿ 18 ಶತಕ ಗಳಿಸಿದ ಹಶೀಮ್ ಆಮ್ಲ ದಾಖಲೆಯನ್ನು ಮುರಿದ ಅಝಂ 97ನೇ ಇನಿಂಗ್ಸ್‌ನಲ್ಲೇ ಈ ದಾಖಲೆಗೆ ಪಾತ್ರರಾದರು.