ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಂಡ: ಗಾಯಾಳು ರಾಹುಲ್ ಬದಲಿಗೆ ಇಶಾನ್ ಕಿಶನ್

Update: 2023-05-08 12:45 GMT

ಹೊಸದಿಲ್ಲಿ, ಮೇ 8: ಆಸ್ಟ್ರೇಲಿಯ ವಿರುದ್ಧ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್(ಡಬ್ಲುಟಿಸಿ) ಫೈನಲ್‌ಗೆ ಗಾಯಗೊಂಡಿರುವ ಕೆ.ಎಲ್.ರಾಹುಲ್ ಬದಲಿಗೆ ಯುವ ವಿಕೆಟ್‌ಕೀಪರ್-ಬ್ಯಾಟರ್ ಇಶಾನ್ ಕಿಶನ್‌ರನ್ನು ಭಾರತದ ಕ್ರಿಕೆಟ್ ತಂಡಕ್ಕೆ ಅಖಿಲ ಭಾರತ ಸೀನಿಯರ್ ಆಯ್ಕೆ ಸಮಿತಿಯು ಸೋಮವಾರ ಆಯ್ಕೆ ಮಾಡಿದೆ.
ಡಬ್ಲುಟಿಸಿ ಫೈನಲ್ ಪಂದ್ಯವು ಲಂಡನ್‌ನ ದಿ ಓವಲ್‌ನಲ್ಲಿ ಜೂ. 7ರಿಂದ 11ರ ತನಕ ನಡೆಯಲಿದೆ.

ಲಕ್ನೊ ಸೂಪರ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಲಕ್ನೊದಲ್ಲಿ ಮೇ 1ರಂದು ನಡೆದಿದ್ದ ಐಪಿಎಲ್ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ರಾಹುಲ್ ಗಾಯಗೊಂಡಿದ್ದರು. ಸ್ಪೆಷಲಿಸ್ಟ್‌ರನ್ನು ಸಂಪರ್ಕಿಸಿದ ನಂತರ ರಾಹುಲ್ ಶೀಘ್ರವೇ ಸರ್ಜರಿಗೆ ಒಳಗಾಗಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಆಸ್ಟ್ರೇಲಿಯ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಿಂದ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ಹೇಳಿಕೆಯೊಂದರಲ್ಲಿ ತಿಳಿಸಿದೆ.

ವೇಗದ ಬೌಲರ್ ಜಯದೇವ್ ಉನದ್ಕಟ್ ನೆಟ್‌ನಲ್ಲಿ ಬೌಲಿಂಗ್ ಮಾಡುವಾಗ ಭುಜನೋವಿಗೆ ಒಳಗಾಗಿದ್ದು, ಡಬ್ಲುಟಿಸಿ ಫೈನಲ್‌ನಲ್ಲಿ ಉನದ್ಕಟ್ ಭಾಗವಹಿಸುವ ಕುರಿತಾಗಿ ನಂತರ ನಿರ್ಧರಿಸಲಾಗುತ್ತದೆ.
ವೇಗದ ಬೌಲರ್ ಉಮೇಶ್ ಯಾದವ್ ಆರ್‌ಸಿಬಿ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವೆ ಎ.26ರಂದು ನಡೆದಿದ್ದ ಐಪಿಎಲ್ ಪಂದ್ಯದ ವೇಳೆ ಗಾಯಗೊಂಡಿದ್ದಾರೆ. ಸದ್ಯ ಅವರು ಕೆಕೆಆರ್ ವೈದ್ಯಕೀಯ ತಂಡದ ನಿಗಾದಲ್ಲಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡ ಕೂಡ ಕೆಕೆಆರ್‌ನ ಮೆಡಿಕಲ್ ತಂಡದೊಂದಿಗೆ ನಿಕಟ ಸಂಪರ್ಕದಲ್ಲಿದೆ.

ಡಬ್ಲುಟಿಸಿ ಫೈನಲ್‌ಗೆ ಭಾರತ ತಂಡ: ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಸ್.ಭರತ್(ವಿಕೆಟ್‌ಕೀಪರ್), ಆರ್.ಅಶ್ವಿನ್, ರವೀಂದ್ರ ಜಡೇಜ,ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮುಹಮ್ಮದ್ ಶಮಿ, ಮುಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕಟ್, ಇಶಾನ್ ಕಿಶನ್(ವಿಕೆಟ್‌ಕೀಪರ್).

ಮೀಸಲು ಆಟಗಾರರು: ಋತುರಾಜ್ ಗಾಯಕ್ವಾಡ್, ಮುಕೇಶ್ ಕುಮಾರ್, ಸೂರ್ಯಕುಮಾರ್ ಯಾದವ್.
 

Similar News