ಐಪಿಎಲ್: ಪಂಜಾಬ್ ಕಿಂಗ್ಸ್‌ ತಂಡವನ್ನು ರೋಚಕವಾಗಿ ಮಣಿಸಿದ ಕೆಕೆಆರ್

ಶಿಖರ್ ಧವನ್ ಅರ್ಧಶತಕ ವ್ಯರ್ಥ

Update: 2023-05-08 18:16 GMT

 ಕೋಲ್ಕತಾ, ಮೇ 8: ನಾಯಕ ನಿತಿಶ್ ರಾಣಾ (51 ರನ್, 38 ಎಸೆತ, 6 ಬೌಂಡರಿ, 1 ಸಿಕ್ಸರ್)ಹಾಗೂ ಆಲ್‌ರೌಂಡರ್ ಆ್ಯಂಡ್ರೆ ರಸೆಲ್(42 ರನ್, 23 ಎಸೆತ, 3 ಬೌಂಡರಿ, 3 ಸಿಕ್ಸರ್) ಬ್ಯಾಟಿಂಗ್ ಬಲದಿಂದ ಸೋಮವಾರ ನಡೆದ 53ನೇ ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಕೊನೆಯ ಓವರ್‌ನಲ್ಲಿ 5 ವಿಕೆಟ್ ಅಂತರದಿಂದ ರೋಚಕವಾಗಿ ಮಣಿಸಿದೆ.

  ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಂಜಾಬ್ ಆರಂಭಿಕ ಬ್ಯಾಟರ್, ನಾಯಕ ಶಿಖರ್ ಧವನ್ ಅರ್ಧಶತಕದ(57 ರನ್, 47 ಎಸೆತ, 9 ಬೌಂಡರಿ, 1 ಸಿಕ್ಸರ್)ಸಹಾಯದಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 179 ರನ್ ಗಳಿಸಿತು. ಗೆಲ್ಲಲು 180 ರನ್ ಗುರಿ ಪಡೆದ ಕೆಕೆಆರ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. 

ಆತಿಥೇಯ ಕೆಕೆಆರ್ ಪರ ಆಲ್‌ರೌಂಡರ್ ಆ್ಯಂಡ್ರೆ ರಸೆಲ್ ಹಾಗೂ ರಿಂಕು ಸಿಂಗ್(ಔಟಾಗದೆ 21, 10 ಎಸೆತ) ಆರನೇ ವಿಕೆಟ್ ಗೆ 56 ರನ್ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಆರಂಭಿಕ ಬ್ಯಾಟರ್ ಜೇಸನ್ ರಾಯ್(38 ರನ್, 24 ಎಸೆತ)ಹಾಗೂ ಗುರ್ಬಾಝ್(15 ರನ್) ಎರಡಂಕೆಯ ಸ್ಕೋರ್ ಗಳಿಸಿದರು.

ಪಂಜಾಬ್ ಪರ ರಾಹುಲ್ ಚಹಾರ್(2-23)ಯಶಸ್ವಿ ಬೌಲರ್ ಎನಿಸಿಕೊಂಡರು.

ಪಂಜಾಬ್‌ನ ಆರಂಭ ಉತ್ತಮವಾಗಿರಲಿಲ್ಲ. ಪ್ರಭ್‌ಸಿಮ್ರಾನ್ ಸಿಂಗ್(12 ರನ್, 8 ಎಸೆತ) ಹಾಗೂ ಭಾನುಕ ರಾಜಪಕ್ಸ(0)4ನೇ ಓವರ್‌ನೊಳಗೆ ಪೆವಿಲಿಯನ್ ಹಾದಿ ಹಿಡಿದರು. ಜಿತೇಶ್ ಶರ್ಮಾ(21 ರನ್, 18 ಎಸೆತ),ಶಾರೂಖ್ ಖಾನ್(ಔಟಾಗದೆ 21, 8 ಎಸೆತ), ರಿಷಿ ಧವನ್(19 ರನ್, 11 ಎಸೆತ), ಹರ್‌ಪ್ರೀತ್ ಬ್ರಾರ್(ಔಟಾಗದೆ 17) ಹಾಗೂ ಲಿವಿಂಗ್‌ಸ್ಟೋನ್(15 ರನ್) ಎರಡಂಕೆಯ ಸ್ಕೋರ್ ಗಳಿಸಿದರು.
ಪಂಜಾಬ್ 53 ರನ್‌ಗೆ 3 ವಿಕೆಟ್ ಕಳೆದುಕೊಂಡಿದ್ದಾಗ ಧವನ್ 4ನೇ ವಿಕೆಟ್‌ನಲ್ಲಿ ಜಿತೇಶ್ ಶರ್ಮಾ ಜೊತೆಗೂಡಿ 53 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.    

8ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 40 ರನ್ ಸೇರಿಸಿದ ಶಾರೂಖ್ ಖಾನ್ ಹಾಗೂ ಹರ್‌ಪ್ರೀತ್ ಬ್ರಾರ್ ತಂಡ ಸ್ಪರ್ಧಾತ್ಮಕ ಮೊತ್ತ ಗಳಿಸಲು ನೆರವಾದರು. ಶಾರೂಖ್ ಹಾಗೂ ಹರ್‌ಪ್ರೀತ್ ಕೊನೆಯ 2 ಓವರ್‌ಗಳಲ್ಲಿ 36 ರನ್ ಸೇರಿಸಿದ ಕಾರಣ ಪಂಜಾಬ್ 180ರ ಗಡಿ ತಲುಪಿತು.

ಆತಿಥೇಯ ಕೆಕೆಆರ್ ಪರ ವರುಣ್ ಚಕ್ರವರ್ತಿ(3-26)ಯಶಸ್ವಿ ಬೌಲರ್ ಎನಿಸಿಕೊಂಡರು. ಹರ್ಶಿತ್ ರಾಣಾ(2-33)ಎರಡು ವಿಕೆಟ್ ಪಡೆದರೆ, ನಿತಿಶ್ ರಾಣಾ(1-7) ಹಾಗೂ ಸುಯಶ್ ಶರ್ಮಾ(1-26)ತಲಾ ಒಂದು ವಿಕೆಟ್ ಪಡೆದರು.
 

Similar News