ಐಪಿಎಲ್: ಕೆಕೆಆರ್‌ ವಿರುದ್ಧ ರಾಜಸ್ಥಾನ ರಾಯಲ್ಸ್ ಗೆ ಭರ್ಜರಿ ಜಯ

ಯಶಸ್ವಿ ಜೈಸ್ವಾಲ್ ವೇಗದ ಅರ್ಧಶತಕ, ವೆಂಕಟೇಶ್ ಅಯ್ಯರ್ ಅರ್ಧಶತಕ ವ್ಯರ್ಥ

Update: 2023-05-11 17:33 GMT

  ಕೋಲ್ಕತಾ, ಮೇ 11: ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ದಾಖಲೆಯ ಅರ್ಧಶತಕದ ಸಹಾಯದಿಂದ ರಾಜಸ್ಥಾನ ರಾಯಲ್ಸ್ ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್‌ನ 56ನೇ ಪಂದ್ಯವನ್ನು 9 ವಿಕೆಟ್‌ಗಳ ಅಂತರದಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ.

 ಗುರುವಾರ ನಡೆದ ಪಂದ್ಯದಲ್ಲಿ ಗೆಲ್ಲಲು 150 ರನ್ ಗುರಿ ಪಡೆದಿದ್ದ ರಾಜಸ್ಥಾನ ತಂಡ 13.1 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿದೆ.

ಜೈಸ್ವಾಲ್(ಔಟಾಗದೆ 98 ರನ್, 47 ಎಸೆತ, 12 ಬೌಂಡರಿ, 5 ಸಿಕ್ಸರ್)ಹಾಗೂ ಸಂಜು ಸ್ಯಾಮ್ಸನ್(ಔಟಾಗದೆ 48 ರನ್, 29 ಎಸೆತ, 2 ಬೌಂಡರಿ, 5 ಸಿಕ್ಸರ್)2ನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 121 ರನ್ ಜೊತೆಯಾಟ ನಡೆಸಿ ತಂಡಕ್ಕೆ ಗೆಲುವು ತಂದರು. ಶಾರ್ದೂಲ್ ಠಾಕೂರ್ ಬೌಲಿಂಗ್‌ನಲ್ಲಿ ಬೌಂಡರಿ ಗಳಿಸಿದ ಜೈಸ್ವಾಲ್ ಗೆಲುವಿನ ವಿಧಿವಿಧಾನ ಪೂರೈಸಿದರು. ಕೇವಲ 2 ರನ್‌ನಿಂದ ಶತಕ ವಂಚಿತರಾದರು.

ಈ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೆಕೆಆರ್ ಅಗ್ರ ಸರದಿಯ ಬ್ಯಾಟರ್ ವೆಂಕಟೇಶ್ ಅಯ್ಯರ್(57 ರನ್, 42 ಎಸೆತ, 2 ಬೌಂಡರಿ, 4 ಸಿಕ್ಸರ್) ಅರ್ಧಶತಕದ ಕೊಡುಗೆಯ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು.

ರಾಜಸ್ಥಾನದ ಸ್ಪಿನ್ನರ್ ಯಜುವೇಂದ್ರ ಚಹಾಲ್(4-25)ಯಶಸ್ವಿ ಪ್ರದರ್ಶನದಿಂದ ಗಮನ ಸೆಳೆದರು. ವೇಗದ ಬೌಲರ್ ಟ್ರೆಂಟ್ ಬೌಲ್ಟ್(2-15) ಎರಡು ವಿಕೆಟ್ ಪಡೆದರೆ, ಕೆ.ಎಂ.ಅಸೀಫ್(1-27)ಹಾಗೂ ಸಂದೀಪ್ ಶರ್ಮಾ(1-34) ತಲಾ 1 ವಿಕೆಟ್‌ಗಳನ್ನು ಕಬಳಿಸಿದರು.

ಕೆಕೆಆರ್ ಪರ ಆಲ್‌ರೌಂಡರ್ ಅಯ್ಯರ್ ಸರ್ವಾಧಿಕ ಸ್ಕೋರ್ ಗಳಿಸಿದರೆ, ನಾಯಕ ನಿತಿಶ್ ರಾಣಾ(22 ರನ್, 17 ಎಸೆತ), ರಹಮಾನುಲ್ಲಾ ಗುರ್ಬಾಝ್(18 ರನ್, 12 ಎಸೆತ)ಹಾಗೂ ರಿಂಕು ಸಿಂಗ್(16 ರನ್, 18 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.

 

Similar News