ಯಾವುದೇ ಹೆಸರು ಉಲ್ಲೇಖಿಸದೇ ಟ್ವಿಟರ್ ನೂತನ ಸಿಇಒ ಕುರಿತು ಸುಳಿವು ನೀಡಿದ ಎಲಾನ್ ಮಸ್ಕ್

Update: 2023-05-12 10:06 GMT

ನ್ಯೂಯಾರ್ಕ್: ಟ್ವಿಟರ್‌ನ ನೂತನ ಸಿಇಒ ಹುದ್ದೆಗೆ ಎನ್‌ಬಿಸಿ ಯೂನಿವರ್ಸಲ್‌ನ ಕಾರ್ಯಕಾರಿಣಿ ಅಧಿಕಾರಿ ಲಿಂಡಾ ಯಕಾರಿನೊ ಮಾತುಕತೆಯಲ್ಲಿ ತೊಡಗಿದ್ದಾರೆ ಎಂದು Wall Street Journal ವರದಿ ಮಾಡಿದೆ. ಇದಕ್ಕೂ ಮುನ್ನ ಸಾಮಾಜಿಕ ಮಾಧ್ಯಮವಾದ ಟ್ವಿಟರ್ ಅನ್ನು ಮುನ್ನಡೆಸಲು ಹೊಸ ನಾಯಕನನ್ನು ಪತ್ತೆ ಹಚ್ಚಲಾಗಿದ್ದು, ನಾನು ಮುಖ್ಯ ತಂತ್ರಜ್ಞನಾಗಿ ಕಾರ್ಯನಿರ್ವಹಿಸಲಿದ್ದೇನೆ ಎಂದು ಎಲಾನ್ ಮಸ್ಕ್ ಪ್ರಕಟಿಸಿದ್ದರು.

ಯಾವುದೇ ವ್ಯಕ್ತಿಯ ಹೆಸರನ್ನು ಉಲ್ಲೇಖಿಸದೆ ಟ್ವೀಟ್ ಮಾಡಿರುವ ಎಲಾನ್ ಮಸ್ಕ್, "ಟ್ವಿಟರ್‌ನ ನೂತನ ಸಿಇಒ ಆಗಿ ಇನ್ನು ಆರು ವಾರಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ" ಎಂದು ಪ್ರಕಟಿಸಿದ್ದರು. ಆದರೆ, ಎನ್‌ಬಿಸಿ ಯೂನಿವರ್ಸಲ್‌ನ ಜಾಗತಿಕ ಜಾಹೀರಾತು ಮತ್ತು ಪಾಲುದಾರಿಕೆಗಳ ವಿಭಾಗದ ಅಧ್ಯಕ್ಷರಾಗಿರುವ ಲಿಂಡಾ ಈ ಕುರಿತು ಪ್ರಶ್ನಿಸಲಾಗಿದ್ದ ಇಮೇಲ್‌ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಎನ್‌ಬಿಸಿ ಯೂನಿವರ್ಸಲ್‌ನ ಪ್ರತಿನಿಧಿಯೊಬ್ಬರ ಪ್ರಕಾರ, ಲಿಂಡಾ ಕಂಪನಿಯ ಭವಿಷ್ಯದ ದೃಷ್ಟಿಕೋನದ ಕುರಿತು ಜಾಹೀರಾತುದಾರರಿಗೆ ಮುನ್ನೋಟ ನೀಡುವ ಪೂರ್ವತಯಾರಿಯಲ್ಲಿ ತಲ್ಲೀನರಾಗಿದ್ದಾರೆ ಎಂದು ಹೇಳಿದ್ದಾರೆ.

ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಎಲಾನ್ ಮಸ್ಕ್ ಟ್ವಿಟರ್ ಅನ್ನು 44 ಶತಕೋಟಿ ಡಾಲರ್ ತೆತ್ತು  ಖರೀದಿಸಿದ್ದರು ಮತ್ತು ತಾನು ಸೀಮಿತ ಅವಧಿಗೆ ಮಾತ್ರ ಅದರ ಮುಖ್ಯಸ್ಥನಾಗಿರುತ್ತೇನೆ ಎಂದು ಸುಳಿವು ನೀಡಿದ್ದರು. ಇದರ ಬೆನ್ನಿಗೇ ಟ್ವಿಟರ್‌ಗೆ ನೂತನ ಸಿಇಒ ಅನ್ನು ಗುರುತಿಸಲಾಗಿದೆ ಎಂದು ಎಲಾನ್ ಮಸ್ಕ್ ಪ್ರಕಟಿಸಿದ್ದಾರೆ.

Similar News