ಐಪಿಎಲ್: ಗುಜರಾತ್ ಟೈಟಾನ್ಸ್ ವಿರುದ್ಧ ಮುಂಬೈಗೆ ಜಯ

ರಶೀದ್ ಖಾನ್ ಆಲ್‌ರೌಂಡ್ ಆಟ ವ್ಯರ್ಥ, ಸೂರ್ಯಕುಮಾರ್ ಆಕರ್ಷಕ ಶತಕ

Update: 2023-05-12 18:09 GMT

   ಮುಂಬೈ, ಮೇ 12: ಸೂರ್ಯಕುಮಾರ್ ಯಾದವ್ ಆಕರ್ಷಕ ಶತಕ(ಔಟಾಗದೆ 103 ರನ್, 49 ಎಸೆತ, 11 ಬೌಂಡರಿ, 6 ಸಿಕ್ಸರ್), ಆಕಾಶ್ ಮಧ್ವಾಲ್(3-31) ನೇತೃತ್ವದ ಬೌಲರ್‌ಗಳ ಸಂಘಟಿತ ದಾಳಿಯ ಸಹಾಯದಿಂದ ಮುಂಬೈ ಇಂಡಿಯನ್ಸ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ ಐಪಿಎಲ್‌ನ 57ನೇ ಪಂದ್ಯದಲ್ಲಿ 27 ರನ್ ಅಂತರದಿಂದ ಜಯಭೇರಿ ಬಾರಿಸಿದೆ.

 ಗುಜರಾತ್ ಪರ ರಶೀದ್‌ಖಾನ್ ಆಲ್‌ರೌಂಡ್ ಆಟದಿಂದ ಮಿಂಚಿ ಗಮನ ಸೆಳೆದರು. ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 218 ರನ್ ಗಳಿಸಿತು. ಸ್ಪಿನ್ನರ್ ರಶೀದ್ ಖಾನ್(4-30) ನಾಲ್ಕು ವಿಕೆಟ್ ಗೊಂಚಲು ಪಡೆದರು.

ಗೆಲ್ಲಲು 219 ರನ್ ಗುರಿ ಬೆನ್ನಟ್ಟಿದ ಗುಜರಾತ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು.

ಗುಜರಾತ್ ಪರ ರಶೀದ್ ಖಾನ್(ಔಟಾಗದೆ 79 ರನ್, 32 ಎಸೆತ, 3 ಬೌಂಡರಿ, 10 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು. ಡೇವಿಡ್‌ ಮಿಲ್ಲರ್(41 ರನ್, 26 ಎಸೆತ), ವಿಜಯ್ ಶಂಕರ್(29 ರನ್,14 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು. ಅಗ್ರ ಸರದಿಯಲ್ಲಿ ಸಹಾ(2 ರನ್), ಗಿಲ್(6 ರನ್) ಹಾಗೂ ನಾಯಕ ಹಾರ್ದಿಕ್ ಪಾಂಡ್ಯ(4 ರನ್) ಭಾರೀ ವೈಫಲ್ಯ ಕಂಡರು.

ಆಕಾಶ್ ಯಶಸ್ವಿ ಬೌಲರ್ ಎನಿಸಿಕೊಂಡರೆ, ಕುಮಾರ್ ಕಾರ್ತಿಕೇಯ(2-37) ಹಾಗೂ ಪಿಯೂಷ್ ಚಾವ್ಲಾ(2-36)ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.

 ಸೂರ್ಯ ಚೊಚ್ಚಲ ಶತಕ: ಇದಕ್ಕೂ ಮೊದಲು ಸೂರ್ಯ 49 ಎಸೆತಗಳಲ್ಲಿ 11 ಬೌಂಡರಿ ಹಾಗೂ 6 ಸಿಕ್ಸರ್‌ಗಳ ಸಹಾಯದಿಂದ ತವರು ಮೈದಾನದಲ್ಲಿ ಐಪಿಎಲ್ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು. ವೇಗಿ ಜೋಸೆಫ್ ಎಸೆದ ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಮೂರಂಕೆಯನ್ನು ದಾಟಿದರು.

 ಇನಿಂಗ್ಸ್ ಆರಂಭಿಸಿದ ಇಶಾನ್ ಕಿಶನ್(31 ರನ್, 20 ಎಸೆತ) ಹಾಗೂ ನಾಯಕ ರೋಹಿತ್ ಶರ್ಮಾ(29 ರನ್, 18 ಎಸೆತ)ಮೊದಲ ವಿಕೆಟ್‌ಗೆ 61 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ವಿಷ್ಣು ವಿನೋದ್(30 ರನ್, 20 ಎಸೆತ)ಹಾಗೂ ಸೂರ್ಯ ಕುಮಾರ್ 4ನೇ ವಿಕೆಟ್‌ಗೆ 65 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ವಿಷ್ಣು ಹಾಗೂ ಟಿಮ್ ಡೇವಿಡ್(5 ರನ್) ಔಟಾದ ನಂತರ ಕ್ಯಾಮರೂನ್ ಗ್ರೀನ್(ಔಟಾಗದೆ 3)ಜೊತೆಗೆ ಕೈಜೋಡಿಸಿದ ಸೂರ್ಯ ಕುಮಾರ್ 6ನೇ ವಿಕೆಟ್‌ಗೆ 54 ರನ್(18 ಎಸೆತ)ಸೇರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

ಸೂರ್ಯ ಮುಂಬೈ ಪರ 3ನೇ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದರು. 2008ರಲ್ಲಿ ಸಿಎಸ್‌ಕೆ ವಿರುದ್ಧ ಸನತ್ ಜಯಸೂರ್ಯ(ಔಟಾಗದೆ 114) ಹಾಗೂ 2012ರಲ್ಲಿ ಕೋಲ್ಕತಾದಲ್ಲಿ ಕೆಕೆಆರ್ ವಿರುದ್ಧ ರೋಹಿತ್ ಶರ್ಮಾ(ಔಟಾಗದೆ 103)ಶತಕ ಗಳಿಸಿದ್ದರು.
 

Similar News