ಕೊಹ್ಲಿ, ಪ್ಲೆಸಿಸ್ ಭರ್ಜರಿ ಜೊತೆಯಾಟ, ಹೈದರಾಬಾದ್‌ಗೆ ಸೋಲುಣಿಸಿದ ಆರ್‌ಸಿಬಿ

ಐಪಿಎಲ್: ಹೆನ್ರಿಕ್ ಕ್ಲಾಸೆನ್ ಶತಕ ವ್ಯರ್ಥ

Update: 2023-05-18 17:45 GMT

 ಹೈದರಾಬಾದ್, ಮೇ 18: ವಿರಾಟ್ ಕೊಹ್ಲಿ ಶತಕ(100 ರನ್, 63 ಎಸೆತ, 12 ಬೌಂಡರಿ, 4 ಸಿಕ್ಸರ್)ಹಾಗೂ ನಾಯಕ ಎಫ್‌ಡು ಪ್ಲೆಸಿಸ್(71 ರನ್, 47 ಎಸೆತ, 7 ಬೌಂಡರಿ, 2 ಸಿಕ್ಸರ್) ಭರ್ಜರಿ ಅರ್ಧಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್‌ನ 65ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್‌ಗಳ ಅಂತರದಿಂದ ಮಣಿಸಿತು.

ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಆರ್‌ಸಿಬಿ ನಾಯಕ ಎಫ್‌ಡು ಪ್ಲೆಸಿಸ್ ಹೈದರಾಬಾದ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಹೈದರಾಬಾದ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 186 ರನ್ ಗಳಿಸಿತು.

ಗೆಲ್ಲಲು 187 ರನ್ ಗುರಿ ಬೆನ್ನಟ್ಟಿದ ಆರ್‌ಸಿಬಿ 19.2 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗೆಲುವಿನ ನಗೆ ಬೀರಿತು.
 ಇನಿಂಗ್ಸ್ ಆರಂಭಿಸಿದ ಕೊಹ್ಲಿ ಹಾಗೂ ಪ್ಲೆಸಿಸ್ 17.5 ಓವರ್‌ಗಳಲ್ಲಿ 172 ರನ್ ಗಳಿಸಿ ಬೆಂಗಳೂರಿನ ರನ್ ಚೇಸಿಂಗ್‌ಗೆ ಭರ್ಜರಿ ಬುನಾದಿ ಹಾಕಿಕೊಟ್ಟರು. ಕೊಹ್ಲಿ 62 ಎಸೆತಗಳಲ್ಲಿ 12 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ ಐಪಿಎಲ್‌ನಲ್ಲಿ ಆರನೇ ಶತಕ ಪೂರೈಸಿದರು. ಆದರೆ ಮುಂದಿನ ಎಸೆತದಲ್ಲಿ ಭುವನೇಶ್ವರ ಕುಮಾರ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.

ಪ್ಲೆಸಿಸ್ ಕೂಡ ಕೊಹ್ಲಿ ಬೆನ್ನಿಗೇ ವಿಕೆಟ್‌ ಒಪ್ಪಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್(5ರನ್) ಹಾಗೂ ಮೈಕಲ್ ಬ್ರೆಸ್‌ವೆಲ್(4 ರನ್)ಗೆಲುವಿನ ವಿಧಿ ವಿಧಾನ ಪೂರೈಸಿದರು. 13ನೇ ಪಂದ್ಯದಲ್ಲಿ 7ನೇ ಗೆಲುವು ದಾಖಲಿಸಿದ ಬೆಂಗಳೂರು ಒಟ್ಟು 14 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿತು.

  ಇದಕ್ಕೂ ಮೊದಲು 19ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದ ಕ್ಲಾಸೆನ್ ಏಕಾಂಗಿಯಾಗಿ ಹೋರಾಡಿ ಹೈದರಾಬಾದ್ ತಂಡ ಉತ್ತಮ ಮೊತ್ತ ಹಾಕುವಲ್ಲಿ ನೆರವಾದರು. 49 ಎಸೆತಗಳಲ್ಲಿ ಶತಕ ಪೂರೈಸಿದ ಕ್ಲಾಸೆನ್ ವೇಗವಾಗಿ ಈ ಸಾಧನೆ ಮಾಡಿದ ಹೈದರಾಬಾದ್‌ನ 2ನೇ ಬ್ಯಾಟರ್ ಎನಿಸಿಕೊಂಡರು.

ದಕ್ಷಿಣ ಆಫ್ರಿಕಾದ ಕ್ಲಾಸೆನ್ ಟಿ-20 ಕ್ರಿಕೆಟ್‌ನಲ್ಲಿ 2ನೇ ಶತಕ ಹಾಗೂ ಐಪಿಎಲ್‌ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದರು. ಹ್ಯಾರಿ ಬ್ರೂಕ್ (ಔಟಾಗದೆ 27 ರನ್) ಅವರೊಂದಿಗೆ ಕೈಜೋಡಿಸಿದ ಕ್ಲಾಸೆನ್ ಆರ್‌ಸಿಬಿಗೆ 187 ರನ್ ಗುರಿ ನೀಡಲು ನೆರವಾದರು. ಅಂತಿಮ ಓವರ್ ಬೌಲಿಂಗ್ ಮಾಡಿದ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಒಂದು ವಿಕೆಟ್ ಕಬಳಿಸುವ ಜೊತೆಗೆ ಕೇವಲ 4 ರನ್ ನೀಡಿ ಹೈದರಾಬಾದ್ ತಂಡವನ್ನು 200ರೊಳಗೆ ನಿಯಂತ್ರಿಸಿದರು.

Similar News