×
Ad

ಇಸ್ರೇಲ್ ಧ್ವಜಮೆರವಣಿಗೆಯಲ್ಲಿ ಫೆಲೆಸ್ತೀನೀಯರ ಮೇಲೆ ದಾಳಿ: ವರದಿ

Update: 2023-05-19 22:19 IST

ರಮಲ್ಲಾ, ಮೇ 19: ಗುರುವಾರ ಇಸ್ರೇಲಿಯನ್ನರು ನಡೆಸಿದ ಧ್ವಜಮೆರವಣಿಗೆ ಸಂದರ್ಭ ಜೆರುಸಲೇಂನಲ್ಲಿ ಸಾವಿರಾರು ಇಸ್ರೇಲಿ ವಸಾಹತುಗಾರರು ಸೇರಿದ್ದು  ಓಲ್ಡ್ ಸಿಟಿಯಲ್ಲಿ ಫೆಲೆಸ್ತೀನ್ ಪ್ರಜೆಗಳತ್ತ ಕಲ್ಲು ತೂರಾಟ ನಡೆದಿದೆ ಎಂದು ವರದಿಯಾಗಿದೆ.

ಪೂರ್ವ ಜೆರುಸಲೇಂ ನಗರವನ್ನು ಇಸ್ರೇಲ್ ವಶಪಡಿಸಿಕೊಂಡ ದಿನದ ವಾರ್ಷಿಕ ದಿನವಾದ ಮೇ 18ರಂದು ಪೂರ್ವ ಜೆರುಸಲೇಂನಿಂದ ದಮಾಸ್ಕಸ್ ಗೇಟ್ ಪ್ರದೇಶದವರೆಗೆ ಧ್ವಜ ಮೆರವಣಿಗೆ ನಡೆದಿದ್ದು ಇದರಲ್ಲಿ ರಾಷ್ಟ್ರೀಯ ಭದ್ರತಾ ಸಚಿವ ಬೆನ್ಗ್ವಿರ್ ಸೇರಿದಂತೆ ಹಲವು ಸಚಿವರು, ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು. ಸುಮಾರು 1,200ಕ್ಕೂ ಅಧಿಕ ಜನರು ಅಲ್-ಅಕ್ಸಾ ಮಸೀದಿಯ ಆವರಣಕ್ಕೆ ನುಗ್ಗಿ ಇಸ್ರೇಲಿ ಧ್ವಜವನ್ನು ಬೀಸಿ ಘೋಷಣೆ ಕೂಗಿದರು.

ಡೋಲು, ವಾದ್ಯಗಳ ಹಿಮ್ಮೇಳದೊಂದಿಗೆ ನೃತ್ಯ ಮಾಡುತ್ತಾ ತೆರಳಿದ ಮೆರವಣಿಗೆಗೆ ಇಸ್ರೇಲ್ ಪೊಲೀಸರು ಭದ್ರತೆ ಒದಗಿಸಿದ್ದರು. ಓಲ್ಡ್ ಸಿಟಿಯಲ್ಲಿ ಫೆಲೆಸ್ತೀನ್ ಪ್ರಜೆಗಳ ಬಗ್ಗೆ ಅವಹೇಳನಕಾರಿ ಘೋಷಣೆ ಕೂಗಿದರಲ್ಲದೆ ಅವರತ್ತ ಕಲ್ಲೆಸೆದರು. ದಮಾಸ್ಕಸ್ ಗೇಟ್ನ ಬಳಿಯಿದ್ದ ಮಾಧ್ಯಮ ಸಿಬಂದಿಗಳತ್ತ ದೊಣ್ಣೆಗಳನ್ನು ಬೀಸಿದರು. ವೆಸ್ಟ್ಬ್ಯಾಂಕ್ ಮತ್ತು ಪೂರ್ವ ಜೆರುಸಲೇಂ ನಗರಗಳ ಮೇಲೆ ಇಸ್ರೇಲ್ ಸಾರ್ವಭೌಮತ್ವ ಸ್ಥಾಪನೆಯಾಗಬೇಕು ಎಂದವರು ಆಗ್ರಹಿಸಿದರು.

ಜೆರುಸಲೇಂ ಮತ್ತು ದಮಾಸ್ಕಸ್ ಗೇಟ್ ಪ್ರದೇಶದಲ್ಲಿ ಭದ್ರತೆಗೆ ನಿಯೋಜಿತರಾಗಿದ್ದ ಸುಮಾರು 3,200 ಪೊಲೀಸರು ಅಲ್ಲಿನ ಫೆಲೆಸ್ತೀನ್ ನಿವಾಸಿಗಳನ್ನು ಬಲವಂತವಾಗಿ ಸ್ಥಳಾಂತರಿಸಿದರು. ಕೆಲವರನ್ನು ಬಂಧಿಸಿ ಕರೆದೊಯ್ದರು. ಸುಲ್ತಾನ್ ಸುಲೇಮಾನ್, ನಬ್ಲೂಸ್ ಮತ್ತು ಅಲ್-ಮುಸ್ರಾರ ರಸ್ತೆಗಳಲ್ಲಿ ಸಂಚಾರವನ್ನು ನಿರ್ಬಂಧಿಸಿದರು.

ಪೂರ್ವ ಜೆರುಸಲೇಂನಲ್ಲಿ 3,50,000ಕ್ಕೂ ಅಧಿಕ ಪೆಲೆಸ್ತೀನೀಯರು ವಾಸಿಸುತ್ತಿದ್ದು ಇವರನ್ನು ಪ್ರಜೆಗಳು ಎಂದು ಒಪ್ಪಿಕೊಳ್ಳದ ಇಸ್ರೇಲ್, ನಿವಾಸಿಗಳು ಎಂದು ಕರೆಯುತ್ತಿದೆ.

ಅರಬ್ಬರ ವಿರುದ್ಧ ದ್ವೇಷಪೂರಿತ ಘೋಷಣೆಗೆ ಅಮೆರಿಕ ಖಂಡನೆ

ಗುರುವಾರ ಇಸ್ರೇಲಿ ಪ್ರದರ್ಶನಕಾರರು ನಡೆಸಿದ ಧ್ವಜ ಮೆರವಣಿಗೆಯಲ್ಲಿ ಅರಬ್ಬರ ವಿರುದ್ಧ ದ್ವೇಷಪೂರಿತ ಘೋಷಣೆ ಕೂಗಿರುವುದನ್ನು ಅಮೆರಿಕ ಖಂಡಿಸಿದೆ.

ಜೆರುಸಲೇಂನಲ್ಲಿ ನಡೆದ ಮೆರವಣಿಗೆ ಸಂದರ್ಭ ಅರಬ್ಬರ ವಿರುದ್ಧ ದ್ವೇಷಪೂರಿತ ಮತ್ತು ಜನಾಂಗೀಯ ನಿಂದನೆಯ ಪ್ರಕರಣವನ್ನು ಅಮೆರಿಕ ನಿಸ್ಸಂದಿಗ್ಧವಾಗಿ ವಿರೋಧಿಸುತ್ತದೆ' ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲರ್ ಟ್ವೀಟ್ ಮಾಡಿದ್ದಾರೆ.

Similar News