×
Ad

ಇಮ್ರಾನ್ ಪಕ್ಷವನ್ನು ಭಯೋತ್ಪಾದಕ ಗುಂಪೆಂದು ಹೆಸರಿಸಲು ನಿರ್ಧಾರ: ಪಾಕ್ ಸಚಿವರ ಹೇಳಿಕೆ

Update: 2023-05-19 23:08 IST

ಇಸ್ಲಮಾಬಾದ್, ಮೇ 19: ಮಾಜಿ ಪ್ರಧಾನಿ ಇಮ್ರಾನ್‍ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷವನ್ನು ಭಯೋತ್ಪಾದಕ ಗುಂಪು ಎಂದು ಹೆಸರಿಸಲು ಪಾಕ್ ಸರಕಾರ ಯೋಜಿಸಿದೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ರಾಣಾ ಸನಾವುಲ್ಲಾ ಹೇಳಿದ್ದಾರೆ.

ಪಿಟಿಐ ಪಕ್ಷದ ವಿರುದ್ಧ ಸಾಕಷ್ಟು ಪುರಾವೆಗಳಿರುವ ಹಿನ್ನೆಲೆಯಲ್ಲಿ, ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಹೆಸರಿಸುವ ಬಗ್ಗೆ ಸಚಿವ ಸಂಪುಟ ಚರ್ಚೆ ನಡೆಸಲಿದೆ ಎಂದವರು ಹೇಳಿದ್ದಾರೆ. ಲಾಹೋರ್‍ನಲ್ಲಿರುವ ಇಮ್ರಾನ್‍ಖಾನ್ ಮನೆ `ಝಮಾನ್ ಪಾರ್ಕ್'ಗೆ ಭದ್ರತೆ ಒದಗಿಸಲು ಸುಮಾರು 250 ಅಫ್ಘಾನ್ ಪ್ರಜೆಗಳನ್ನು ನಿಯೋಜಿಸಲಾಗಿದ್ದು ಅವರು ಆಯಕಟ್ಟಿನ ಸ್ಥಾನದಲ್ಲಿದ್ದಾರೆ ಮತ್ತು ಅವರು ಉದ್ದೇಶಿತ ದಾಳಿಗಳನ್ನು ನಡೆಸುವ ಸಾಧ್ಯತೆಯಿದೆ. ಇಮ್ರಾನ್ ನಿವಾಸದಲ್ಲಿ ಸೇರಿಕೊಂಡಿರುವ ಶಂಕಿತರನ್ನು ಹಸ್ತಾಂತರಿಸಲು ಸರಕಾರ ಈಗಾಗಲೇ ಅಂತಿಮ ಗಡುವು ವಿಧಿಸಿದೆ ಎಂದು ಸನಾವುಲ್ಲಾ ಹೇಳಿದ್ದಾರೆ.

ಈ ಮಧ್ಯೆ, ಲಾಹೋರ್‍ನ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಮಾಜಿ ಪ್ರಧಾನಿ ಇಮ್ರಾನ್‍ಖಾನ್ ವಿರುದ್ಧ ದಾಖಲಾಗಿರುವ ಮೂರು ಭಯೋತ್ಪಾದನಾ ಪ್ರಕರಣಗಳಲ್ಲಿ ಇಮ್ರಾನ್‍ಗೆ ಜೂನ್ 2ರವರೆಗೆ ನಿರೀಕ್ಷಣಾ ಜಾಮೀನು ಮಂಜೂರುಗೊಳಿಸಿದೆ ಎಂದು ವರದಿಯಾಗಿದೆ.

Similar News