ಬ್ರಿಜ್ ಭೂಷಣ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನಾನಿರತ ಕುಸ್ತಿಪಟುಗಳಿಂದ ಮೊಂಬತ್ತಿ ಮೆರವಣಿಗೆ

Update: 2023-05-23 16:06 GMT

ಹೊಸದಿಲ್ಲಿ, ಮೇ 23: ಭಾರತದ ಅಗ್ರಮಾನ್ಯ ಮಹಿಳಾ ಕುಸ್ತಿಪಟುಗಳ ನೇತೃತ್ವದಲ್ಲಿ ಸಾವಿರಾರು ಪ್ರತಿಭಟನಾಕಾರರು ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ ಜಮಾಯಿಸಿ ಕುಸ್ತಿ ಫೆಡರೇಶನ್ ಅಧ್ಯಕ್ಷರು ರಾಜೀನಾಮೆ ನೀಡಬೇಕು ಹಾಗೂ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದರು.

 ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಅಪ್ತಾಪ್ತೆ ಸೇರಿದಂತೆ ಯುವ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

 ರಾಷ್ಟ್ರಧ್ವಜವನ್ನು ಕೈಯಲ್ಲಿ ಹಿಡಿದುಕೊಂಡಿದ್ದ್ದ ಪ್ರತಿಭಟನಾಕಾರರು ಸಂಸತ್ ಭವನದ ಸಮೀಪದಲ್ಲಿರುವ ಇಂಡಿಯಾ ಗೇಟ್ ತನಕ ಮೆರವಣಿಗೆ ನಡೆಸಿದರು. ಈ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

 ತೀವ್ರ ಬಿಸಿಗಾಳಿಯ ನಡುವೆಯೂ ಸುಮಾರು ಒಂದು ತಿಂಗಳಿನಿಂದ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮ ತರಬೇತಿಯನ್ನು ಸ್ಥಗಿತಗೊಳಿಸಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತರಾದ ಬಜರಂಗ್ ಪುನಿಯಾ ಹಾಗೂ ಸಾಕ್ಷಿ ಮಲಿಕ್ ಕೂಡ ಪ್ರತಿಭಟನಾಕಾರರೊಂದಿಗೆ ಕೈಜೋಡಿಸಿದ್ದು, ಸಿಂಗ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪದಕಗಳನ್ನು ವಾಪಸ್ ನೀಡುವ ಬೆದರಿಕೆ ಹಾಕಿದ್ದಾರೆ.

 ಕುಸ್ತಿಪಟುಗಳ ಆಂದೋಲನಕ್ಕೆ ವಿರೋಧ ಪಕ್ಷಗಳು ಹಾಗೂ ರೈತ ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗಿದೆ. ಲೈಂಗಿಕ ಕಿರುಕುಳ ಆರೋಪದ ಕುರಿತಂತೆ ಅನೇಕ ಜನರು ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಭಾರತದ ಹೆಚ್ಚಿನ ಕುಸ್ತಿಪಟುಗಳು ಉತ್ತರದ ಕೃಷಿ ರಾಜ್ಯಗಳಾದ ಹರ್ಯಾಣ ಹಾಗೂ ಪಂಜಾಬ್ ರಾಜ್ಯಕ್ಕೆ ಸೇರಿದವರಾಗಿದ್ದಾರೆ.

66ರ ಹರೆಯದ ಸಿಂಗ್ ಆಡಳಿತಾರೂಢ ಬಿಜೆಪಿಯ ಸಂಸದರಾಗಿದ್ದು, ತನ್ನ ವಿರುದ್ಧ ಕೇಳಿ ಬಂದಿರುವ ಆರೋಪಗಳನ್ನು ನಿರಾಕರಿಸುತ್ತಿದ್ದಾರೆ. 

Similar News