ನ್ಯಾಯಾಲಯ ಸಂಕೀರ್ಣದಲ್ಲಿ ಹಿಂಸಾಚಾರ ಪ್ರಕರಣ ಇಮ್ರಾನ್ ಖಾನ್ ಗೆ ಜಾಮೀನು

Update: 2023-05-23 17:37 GMT

ಇಸ್ಲಾಮಾಬಾದ್,ಮೇ 23: ಈ ವರ್ಷದ ಮಾರ್ಚ್ನಲ್ಲಿ ಇಸ್ಲಾಮಾಬಾದ್ನ ನ್ಯಾಯಾಂಗ ಸಂಕೀರ್ಣದಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿದ 8 ಪ್ರಕರಣಗಳಲ್ಲಿ ಇಲ್ಲಿನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ಜಾಮೀನು ನೀಡಿದೆ.

ಪಾಕಿಸ್ತಾನದ ತೆಹ್ರಿಕೆ ಇನ್ಸಾಫ್ ಪಕ್ಷದ ವರಿಷ್ಠರೂ ಆಗಿರುವ ಇಮ್ರಾನ್ ಖಾನ್ ಅವರು ತೋಷಖಾನಾ ಭ್ರಷ್ಟಾಚಾರ ಪ್ರಕರಣದ ವಿಚಾರಣೆಗಾಗಿ ಮಾರ್ಚ್ 18ರಂದು ಭಯೋತ್ಪಾದನಾ ವಿರೋಧಿ ನ್ಯಾಯಾಲಯಕ್ಕೆ ಹಾಜರಾಗುವ ಮುನ್ನ ಪೊಲೀಸರು ಹಾಗೂ ಅವರ ಬೆಂಬಲಿಗರ ನಡುವೆ ಹಿಂಸಾಚಾರ ಭುಗಿಲೆದ್ದಿತ್ತು.

ಈ ಸಂಘರ್ಷದಲ್ಲಿ 25ಕ್ಕೂ ಅಧಿಕ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು.

ನ್ಯಾಯವಾದಿಗಳ ವಾದಪ್ರತಿವಾದವನ್ನು ಆಲಿಸಿದ ನ್ಯಾಯಾಲಯವು ಜೂನ್ 8ರವರೆಗೆ ಎಂಟು ಪ್ರಕರಣಗಳಲ್ಲಿ ಜಾಮೀನು ನೀಡಿದೆ ಎಂದು ಪಕ್ಷವು ಸಂದೇಶದಲ್ಲಿ ತಿಳಿಸಿದೆ.

ಈ ಮಧ್ಯೆ ಅಲ್ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಇಮ್ರಾನ್ ಖಾನ್ ಅವರ ಪತ್ನಿ ಬುಶ್ರಾ ಬೀಬಿ ಅವರನ್ನು ಬಂಧಿಸದಂತೆ ಇಸ್ಲಾಮಾಬಾದ್ನ ಉತ್ತರದಾಯಿತ್ವ ನ್ಯಾಯಾಲಯವು, ರಾಷ್ಟ್ರೀಯ ಉತ್ತರದಾಯಿತ್ವ ಬ್ಯೂರೋ (ಎನ್ಎಬಿ)ಗೆ ಆದೇಶ ನೀಡಿದೆ ಮತ್ತು ಆಕೆಗೆ ಮಧ್ಯಂತರ ಜಾಮೀನು ನೀಡಿದೆ.

ಇದಕ್ಕೂ ಮುನ್ನ ಇಮ್ರಾನ್ ಖಾನ್ ಅವರು ತನ್ನ ಬೆಂಬಲಿಗರಿಗೆ ಶಾಂತಿಯನ್ನು ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದರು. ‘‘ ಒಂದು ನೀವು ಹಿಂಸಾಚಾರಕ್ಕಿಳಿದಲ್ಲಿ, ನಿಮ್ಮನ್ನು ಹತ್ತಿಕ್ಕಲು ಅವರಿಗೆ (ಸರಕಾರ) ಅವಕಾಶ ದೊರೆಯಲಿದೆ. ನಾವು ಯಾವತ್ತೂ ಶಾಂತಿಯುತವಾಗಿ ಪ್ರತಿಭಟಿಸಬೇಕಾಗಿದೆ’’ ಎಂದು ಅವರು ಸೋಮವಾರ ರಾತ್ರಿ ಟ್ವೀಟ್ ಮಾಡಿದ್ದರು.

Similar News