ರಾಜತಾಂತ್ರಿಕ ಸಂಬಂಧ ಮರುಸ್ಥಾಪನೆಗೆ ಸೌದಿ ಅರೆಬಿಯಾ-ಕೆನಡಾ ನಿರ್ಧಾರ

Update: 2023-05-25 17:00 GMT

ರಿಯಾದ್, ಮೇ 25: ಸೌದಿ ಅರೆಬಿಯಾ ಮತ್ತು ಕೆನಡಾ ಸಂಪೂರ್ಣ ರಾಜತಾಂತ್ರಿಕ ಸಂಬಂಧವನ್ನು ಮರುಸ್ಥಾಪಿಸಲಿವೆ ಎಂದು ಸೌದಿ ಅರೆಬಿಯಾ ಸರಕಾರ ಘೋಷಿಸಿದೆ.

2018ರಲ್ಲಿ ಕೆನಡಾದ ಮಾನವ ಹಕ್ಕುಗಳ ಕಾರ್ಯಕರ್ತನನ್ನು ಸೌದಿಯಲ್ಲಿ ಬಂಧಿಸಲಾಗಿತ್ತು. ಈ ಬಗ್ಗೆ ಕೆನಡಾ ಆಕ್ಷೇಪಿಸಿ ಬಂಧಿತರ ಬಿಡುಗಡೆಗೆ ಆಗ್ರಹಿಸಿದಾಗ ಉಭಯ ದೇಶಗಳ ನಡುವಿನ ರಾಜತಾಂತ್ರಿ ಬಾಂಧವ್ಯ ಹದಗೆಟ್ಟಿತ್ತು. ಕೆನಡಾದ ರಾಯಭಾರಿಯನ್ನು ಉಚ್ಛಾಟಿಸಿದ್ದ ಸೌದಿ ಅರೆಬಿಯಾ, ಕೆನಡಾದಿಂದ ತನ್ನ ರಾಯಭಾರಿಯನ್ನು ವಾಪಾಸು ಕರೆಸಿಕೊಂಡಿತ್ತು ಹಾಗೂ ಹೊಸ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿತ್ತು.

ಕಳೆದ ವರ್ಷ ಬ್ಯಾಂಕಾಕ್ ನಲ್ಲಿ ನಡೆದಿದ್ದ ಅಪೆಕ್ ಸಂಘಟನೆಯ ಶೃಂಗಸಭೆಯ ನೇಪಥ್ಯದಲ್ಲಿ ಸೌದಿಯ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಮತ್ತು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ನಡುವೆ ನಡೆದ ಮಾತುಕತೆಯ ಬಳಿಕ ರಾಜತಾಂತ್ರಿಕ ಸಂಬಂಧವನ್ನು ಈ ಹಿಂದಿನ ಮಟ್ಟದಲ್ಲಿ ಮರುಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಸೌದಿಯ ವಿದೇಶಾಂಗ ಇಲಾಖೆ ಹೇಳಿದೆ.

ಉಭಯ ದೇಶಗಳು ಹೊಸ ರಾಯಭಾರಿಗಳನ್ನು ನೇಮಕ ಮಾಡಲಿವೆ ಎಂದು ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಹೇಳಿಕೆ ನೀಡಿದ್ದಾರೆ.

Similar News