ಪೋಲ್ಯಾಂಡ್: ಎರಡನೆ ವಿಶ್ವಯುದ್ಧ ಕಾಲದ ಸಜೀವ ಬಾಂಬ್ ಪತ್ತೆ

Update: 2023-05-26 16:45 GMT

ವಾರ್ಸ: ಪೋಲ್ಯಾಂಡ್‍ನ ವ್ರೋಕ್ಲಾ ನಗರದಲ್ಲಿ ಶುಕ್ರವಾರ 2ನೇ ವಿಶ್ವಯುದ್ಧ ಕಾಲದ ಸಜೀವ ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ನಗರದ ಸುಮಾರು 2,500 ನಿವಾಸಿಗಳನ್ನು ತೆರವುಗೊಳಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ನೈಋತ್ಯ ಪೋಲ್ಯಾಂಡ್‍ನ ವ್ರೋಕ್ಲಾ ನಗರದಲ್ಲಿ ನಡೆಯುತ್ತಿರುವ ರೈಲ್ವೇ ಕಾಮಗಾರಿ ಸಂದರ್ಭ ಸುಮಾರು 250 ಕಿ.ಮೀ ಭಾರದ ಈ ಬಾಂಬ್ ಪತ್ತೆಯಾಗಿದೆ. ಇದು ಜರ್ಮನ್ ನಿರ್ಮಿತ ಎಸ್‍ಸಿ-250 ವೈಮಾನಿಕ ಬಾಂಬ್ ಆಗಿದೆ. ಎರಡನೇ ಮಹಾಯುದ್ಧದ ಸಂದರ್ಭ ಬ್ರೆಸ್ಲಾವ್ ಎಂಬ ಹೆಸರಿನ  ಈ ನಗರವು ಜರ್ಮನಿಗೆ ಸೇರಿತ್ತು. ಈ ನಗರದಲ್ಲಿ ತೀವ್ರ ಸಂಘರ್ಷ ಏರ್ಪಟ್ಟಿತ್ತು ಮತ್ತು ಸೋವಿಯತ್ ಒಕ್ಕೂಟದಿಂದ ನಿರಂತರ ಬಾಂಬ್ ದಾಳಿಗೆ ಒಳಗಾಗಿತ್ತು. ನಂತರ ಜರ್ಮನಿ ಶರಣಾಯಿತು ಹಾಗೂ ಈ ನಗರವನ್ನು ನೆರೆದೇಶ ಪೋಲ್ಯಾಂಡ್‍ಗೆ ಬಿಟ್ಟುಕೊಡಲು ಒಪ್ಪಿತು. ಈ ಹಿನ್ನೆಲೆಯಲ್ಲಿ ಪೋಲ್ಯಾಂಡ್‍ನ ಗಡಿಯನ್ನು ಮರು ರೂಪಿಸಿ, ಬ್ರೆಸ್ಲಾವ್ ನಗರವನ್ನು ಸೇರಿಸಿದ ಹೊಸ ಗಡಿರೇಖೆಯನ್ನು ನಿರ್ಧರಿಸಲಾಯಿತು.

ಶುಕ್ರವಾರ ನಗರದಲ್ಲಿ ಬೃಹತ್ ಸಜೀವ ಬಾಂಬ್ ಪತ್ತೆಯಾದೊಡನೆ ನಗರದ ಸುಮಾರು 2,500 ನಿವಾಸಿಗಳನ್ನು ವಾಹನದಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಟಿವಿಎನ್24 ಸುದ್ಧಿವಾಹಿನಿ ವರದಿ ಮಾಡಿದೆ.

Similar News