ರಾಜಕೀಯಕ್ಕೆ ಸೇರಿದಾಗ ಲೋಕಸಭೆಯಿಂದ ಅನರ್ಹಗೊಳ್ಳುವ ಸಾಧ್ಯತೆಯಿದೆ ಎಂದು ಊಹಿಸಿರಲಿಲ್ಲ: ರಾಹುಲ್ ಗಾಂಧಿ

Update: 2023-06-01 05:37 GMT

ಸ್ಟ್ಯಾನ್‌ಫೋರ್ಡ್ (ಕ್ಯಾಲಿಫೋರ್ನಿಯಾ): ತಾನು ರಾಜಕೀಯಕ್ಕೆ ಸೇರಿದಾಗ ಲೋಕಸಭೆಯಿಂದ ಅನರ್ಹಗೊಳ್ಳುವ ಸಾಧ್ಯತೆಯಿದೆ ಎಂದು ಊಹಿಸಿರಲಿಲ್ಲ.  ಆದರೆ ಅದು ನನಗೆ ಜನರ ಸೇವೆ ಮಾಡಲು “ದೊಡ್ಡ ಅವಕಾಶ” ನೀಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಪ್ರತಿಪಾದಿಸಿದ್ದಾರೆ.

ಮೂರು ನಗರಗಳ ಅಮೆರಿಕ ಪ್ರವಾಸಕ್ಕಾಗಿ ಅಮೆರಿಕದಲ್ಲಿರುವ ರಾಹುಲ್  ಗಾಂಧಿ ಅವರು ಬುಧವಾರ ರಾತ್ರಿ ಕ್ಯಾಲಿಫೋರ್ನಿಯಾದ ಪ್ರತಿಷ್ಠಿತ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳ ಸರಣಿ ಪ್ರಶ್ನೆಗಳಿಗೆ ಪ್ರತಿಕ್ರಿಯೆಯಾಗಿ ಈ ಹೇಳಿಕೆಯನ್ನು ನೀಡಿದ್ದಾರೆ.

ವಯನಾಡ್ (ಕೇರಳ) ಸಂಸದರು ತಮ್ಮ "ಮೋದಿ ಉಪನಾಮ" ಹೇಳಿಕೆಗಾಗಿ 2019 ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ನಂತರ ಅವರನ್ನು ಈ ವರ್ಷದ ಆರಂಭದಲ್ಲಿ ಲೋಕಸಭೆಯಿಂದ ಅನರ್ಹಗೊಳಿಸಲಾಯಿತು.

"2000ನೇ ಇಸವಿಯಲ್ಲಿ ನಾನು ರಾಜಕೀಯಕ್ಕೆ ಸೇರಿದಾಗ ಈ ರೀತಿ ಆಗಬಹುದು ಎಂದು ಊಹಿಸಿರಲಿಲ್ಲ. ನಾನು  ರಾಜಕೀಯಕ್ಕೆ ಸೇರಿದಾಗ ಅಂದುಕೊಂಡಿದ್ದಕ್ಕೆ ಹೊರತಾದ ಘಟನೆಗಳು ಈಗ ನಡೆಯುತ್ತಿರುವುದನ್ನು ನೋಡುತ್ತಿದ್ದೇನೆ'' ಎಂದರು.

ಲೋಕಸಭೆಯಿಂದ ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿರುವುದನ್ನು ಉಲ್ಲೇಖಿಸಿದ  52ರ ಹರೆಯದ ರಾಹುಲ್  ಗಾಂಧಿ, ಈ ರೀತಿ ಏನಾದರೂ ಸಾಧ್ಯ ಎಂದು ತಾನು ಊಹಿಸಿರಲಿಲ್ಲ. ಆದರೆ ಅದು ನಿಜವಾಗಿ ನನಗೆ ಒಂದು ದೊಡ್ಡ ಅವಕಾಶವನ್ನು ನೀಡಿದೆ ಎಂದು ನಾನು ಭಾವಿಸುತ್ತೇನೆ. ಬಹುಶಃ ನನಗೆ ಸಿಗುವ ಅವಕಾಶಕ್ಕಿಂತ ಇದು ದೊಡ್ಡದಾಗಿದೆ. ಅದು ರಾಜಕೀಯ ಕೆಲಸ ಮಾಡುವ ವಿಧಾನವಾಗಿದೆ ಎಂದು ಹೇಳಿದರು.

"ನಾಟಕವು ಆರು ತಿಂಗಳ ಹಿಂದೆ ನಿಜವಾಗಿಯೂ ಆರಂಭವಾಯಿತು ಎಂದು ನಾನು ಭಾವಿಸುತ್ತೇನೆ. ನಾವು ಹೆಣಗಾಡುತ್ತಿದ್ದೇವೆ. ಇಡೀ ಪ್ರತಿಪಕ್ಷಗಳು ಭಾರತದಲ್ಲಿ ಹೆಣಗಾಡುತ್ತಿವೆ. ಭಾರಿ ಆರ್ಥಿಕ ಪ್ರಾಬಲ್ಯ. ಪ್ರಮುಖ ಸಂಸ್ಥೆಗಳ  ವಶದಿಂದಾಗಿ ನಮ್ಮ ದೇಶದಲ್ಲಿ ಪ್ರಜಾಸತ್ತಾತ್ಮಕವಾಗಿ ಹೋರಾಡಲು ನಾವು ಹೆಣಗಾಡುತ್ತಿದ್ದೇವೆ. ಈ ಸಮಯದಲ್ಲಿ ನಾನು  'ಭಾರತ್ ಜೋಡೋ ಯಾತ್ರೆ' ಆರಂಭಿಸಲು ನಿರ್ಧರಿಸಿದೆ'' ಎಂದರು.

Similar News