ಐಪಿಎಲ್ ಅಂತಿಮ ಓವರ್ ನಲ್ಲಿ ಮೋಹಿತ್ ಜೊತೆ ಹಾರ್ದಿಕ್ ಮಾತನಾಡಿದ ನಿರ್ಧಾರ ಪ್ರಶ್ನಿಸಿದ ವೀರೇಂದ್ರ ಸೆಹ್ವಾಗ್

Update: 2023-06-01 09:12 GMT

ಅಹಮದಾಬಾದ್: ಐಪಿಎಲ್- 2023 ರ ಫೈನಲ್ ಪಂದ್ಯದಲ್ಲಿ ಕೊನೆಯ ಎರಡು ಎಸೆತಗಳಲ್ಲಿ 10 ರನ್ ಗಳಿಸಿದ ರವೀಂದ್ರ ಜಡೇಜ ಚೆನ್ನೈ ಸೂಪರ್ ಕಿಂಗ್ಸ್  ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು.  ಚೆನ್ನೈಗೆ ಅಂತಿಮ ಓವರ್ ನಲ್ಲಿ 13 ರನ್ ಅಗತ್ಯವಿದ್ದಾಗ ಕೊನೆಯ ಓವರ್ ಬೌಲಿಂಗ್ ಮಾಡಿದ್ದ ಹಿರಿಯ ವೇಗಿ ಮೋಹಿತ್ ಶರ್ಮಾ ಮೊದಲ 4 ಎಸೆತಗಳಲ್ಲಿ ಕೇವಲ 3 ರನ್‌ಗಳನ್ನು ಬಿಟ್ಟುಕೊಟ್ಟರು. ಪಂದ್ಯದ ಅಂತಿಮ ಓವರ್ ಗುಜರಾತ್ ಟೈಟಾನ್ಸ್ ನ  ಯೋಜನೆಯಂತೆ ನಡೆಯುತ್ತಿತ್ತು. ಆದಾಗ್ಯೂ, ನಾಯಕ ಹಾರ್ದಿಕ್ ಪಾಂಡ್ಯ  ಅವರು ಮೋಹಿತ್ ಜೊತೆಗೆ  ಸ್ವಲ್ಪ ಸಮಯ ಮಾತುಕತೆ ನಡೆಸಿದ  ನಂತರ ಅನುಭವಿ ವೇಗಿ ಶರ್ಮಾ ಅವರ  ಲಯ ಸ್ವಲ್ಪ ತಪ್ಪಿಹೋದಂತೆ ಕಂಡುಬಂತು. ಅಂತಿಮ 2 ಎಸೆತಗಳಲ್ಲಿ 10 ರನ್ ಬಿಟ್ಟುಕೊಟ್ಟರು.  ಪಾಂಡ್ಯ ಅವರ ನಿರ್ಧಾರ  ಮಾಜಿ ಭಾರತ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್  ಅವರಿಗೆ ಇಷ್ಟವಾಗಲಿಲ್ಲ.

ಮೋಹಿತ್ ತನ್ನ ಯೋಜನೆಗಳನ್ನು ಪರಿಪೂರ್ಣವಾಗಿ  ಕಾರ್ಯಗತಗೊಳಿಸುತ್ತಿದ್ದರೂ ಮಧ್ಯಪ್ರವೇಶಿಸಿರುವ ಪಾಂಡ್ಯ  ಅವರ ನಿರ್ಧಾರವನ್ನು ಸೆಹ್ವಾಗ್ ಖಂಡಿಸಿದರು.

"ಬೌಲರ್ ವೊಬ್ಬ  ಚೆನ್ನಾಗಿ ಬೌಲಿಂಗ್ ಮಾಡುವಾಗ ಹಾಗೂ  ಯಾರ್ಕರ್‌ಗಳೊಂದಿಗೆ ಎಸೆತ ಎಸೆಯುತ್ತಿರುವಾಗ , ನೀವು ಯಾಕೆ ಹೋಗಿ ಅವರೊಂದಿಗೆ ಮಾತನಾಡುತ್ತೀರಿ? ಬ್ಯಾಟರ್‌ಗೆ 2  ಎಸೆತಗಳಲ್ಲಿ  10 ಬೇಕು ಹಾಗೂ  ಆಗ  ಯಾರ್ಕರ್ ನೊಂದಿಗೆ ದಾಳಿ ಮಾಡಬೇಕೆಂದು  ಬೌಲರ್ ಗೆ ತಿಳಿದಿದೆ. ಹಾಗಿರುವಾಗ  ನೀವು ಅವರ ಸಮಯವನ್ನು ಏಕೆ ವ್ಯರ್ಥ ಮಾಡುತ್ತೀರಿ? ಮೋಹಿತ್  ಎದುರಾಳಿಗೆ ರನ್ ಬಿಟ್ಟುಕೊಟ್ಟರೆ ಆಗ ನೀವು  ಹೋಗಿ ಒಂದು ಮಾತು ಹೇಳಬಹುದಿತ್ತು, ಆದರೆ ಬೌಲರ್ ತನ್ನ ಕೆಲಸವನ್ನುಚೆನ್ನಾಗಿ  ಮಾಡುತ್ತಿರುವಾಗ ನೀವು ಅಲ್ಲಿ ಮಾತನಾಡುವ ಅಗತ್ಯವೇನಿತ್ತು''  ಎಂದು ಸೆಹ್ವಾಗ್ 'ಕ್ರಿಕ್ ಬಝ್' ಗೆ ಮಾತನಾಡುತ್ತಾ ಪಾಂಡ್ಯರನ್ನು ಟೀಕಿಸಿದ್ದಾರೆ. .

ಹಾರ್ದಿಕ್ ನಿರ್ಧಾರವನ್ನು ಸೆಹ್ವಾಗ್ ಮಾತ್ರ ಟೀಕಿಸಿಲ್ಲ. ಭಾರತದ ದಂತಕಥೆ ಸುನಿಲ್ ಗವಾಸ್ಕರ್ ಕೂಡ ಗುಜರಾತ್ ನಾಯಕ  ಪಂದ್ಯದ ಇಂತಹ ನಿರ್ಣಾಯಕ ಹಂತದಲ್ಲಿ ಬೌಲರ್‌ನ ಲಯದ ಮೇಲೆ ಪರಿಣಾಮ ಬೀರುವುದನ್ನು ನೋಡಿ ನಿರಾಶೆ ವ್ಯಕ್ತಪಡಿಸಿದ್ದಾರೆ.

ಅಂತಿಮವಾಗಿ ಸಿಎಸ್ ಕೆ ತನ್ನ  ಇತಿಹಾಸದಲ್ಲಿ 5 ನೇ ಬಾರಿಗೆ IPL ಪ್ರಶಸ್ತಿಯನ್ನು ಎತ್ತಿಹಿಡಿಯಿತು.  ಆದರೆ ಗುಜರಾತ್ ಟೈಟಾನ್ಸ್  ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಯಿತು.

Similar News