ಜೂನಿಯರ್ ಹಾಕಿ ಏಶ್ಯಕಪ್: ಪಾಕಿಸ್ತಾನವನ್ನು ಸೋಲಿಸಿ ನಾಲ್ಕನೇ ಬಾರಿ ಪ್ರಶಸ್ತಿ ಜಯಿಸಿದ ಭಾರತ

Update: 2023-06-02 05:34 GMT

ಹೊಸದಿಲ್ಲಿ: ಒಮಾನ್‌ನಲ್ಲಿ ಗುರುವಾರ ನಡೆದ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 2-1 ಗೋಲುಗಳಿಂದ ಸೋಲಿಸಿದ ಭಾರತೀಯ ಪುರುಷರ ಜೂನಿಯರ್ ಹಾಕಿ ತಂಡ ನಾಲ್ಕನೇ  ಬಾರಿ ಏಶ್ಯಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಈ ಪ್ರಶಸ್ತಿ ಗೆಲುವಿನೊಂದಿಗೆ ಭಾರತ ಪುರುಷರ ಜೂನಿಯರ್ ಏಶ್ಯಕಪ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ರಾಷ್ಟ್ರವಾಗಿ ಹೊರಹೊಮ್ಮಿತು.

ಅಂಗದ್ ಬೀರ್ ಸಿಂಗ್ (13ನೇ ನಿಮಿಷ)  ಮೊದಲಾರ್ಧದಲ್ಲಿ ಮೊದಲ  ಗೋಲು ಗಳಿಸಿದರೆ  ಅರೈಜೀತ್ ಸಿಂಗ್ ಹುಂದಾಲ್  20ನೇ ನಿಮಿಷದಲ್ಲಿ ಗೋಲು ಗಳಿಸಿ 2-0 ಮುನ್ನಡೆ ಒದಗಿಸಿಕೊಟ್ಟರು. ಪಾಕಿಸ್ತಾನ ದ್ವಿತೀಯಾರ್ಧದ 37ನೇ ನಿಮಿಷದಲ್ಲಿ ಏಕೈಕ ಸಮಾಧಾನಕರ ಗೋಲು ಗಳಿಸಿತು.

ಭಾರತ ಈ ಹಿಂದೆ 2004, 2008 ಹಾಗೂ  2015ರಲ್ಲಿ ಪ್ರಶಸ್ತಿ ಗೆದ್ದಿತ್ತು.

ರನ್ನರ್ ಅಪ್ ಪಾಕಿಸ್ತಾನ ಕೂಡ 1987, 1992 ಮತ್ತು 1996 ರಲ್ಲಿ ಏಶ್ಯ ಕಪ್ ಪ್ರಶಸ್ತಿಯನ್ನು ಗೆದ್ದಿದೆ.

ಪ್ರತಿಷ್ಠಿತ ಟೂರ್ನಿಯಲ್ಲಿ ಅಜೇಯ ಗೆಲುವಿನ ದಾಖಲೆಯ ಮೂಲಕ  ಮಲೇಷ್ಯಾದಲ್ಲಿ ನಡೆಯಲಿರುವ ಎಫ್‌ಐಎಚ್ ಪುರುಷರ ಜೂನಿಯರ್ ವಿಶ್ವಕಪ್‌ಗೆ ಅರ್ಹತೆ ಪಡೆದಿರುವ ಭಾರತದ ಸಾಧನೆಯನ್ನು  ಗುರುತಿಸಿ ಹಾಕಿ ಇಂಡಿಯಾ ಕಾರ್ಯಕಾರಿ ಮಂಡಳಿಯು ಆಟಗಾರರಿಗೆ ತಲಾ 2 ಲಕ್ಷ ರೂಪಾಯಿ ಹಾಗೂ  ಸಹಾಯಕ ಸಿಬ್ಬಂದಿಗೆ ತಲಾ 1 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದೆ.

Similar News