ಒಡಿಶಾ ರೈಲು ದುರಂತ: ಜಾಗತಿಕ ನಾಯಕರ ಶೋಕ

Update: 2023-06-03 18:12 GMT

ಮಾಸ್ಕೊ:  ಒಡಿಶಾದ ಬಹಾನಾಗಾದಲ್ಲಿ ಶನಿವಾರ ಸಂಭವಿಸಿದ ತ್ರಿವಳಿ ರೈಲು ದುರಂತಕ್ಕೆ  ವಿವಿಧ ರಾಷ್ಟ್ರಗಳಿಂದ ಸಂತಾಪಗಳ ಮಹಾಪೂರವೇ ಹರಿದುಬಂದಿದೆ.

288 ಮಂದಿಯನ್ನು ಬಲಿತೆಗೆದುಕೊಂಡು ಈ ಭೀಕರ ಅವಘಡಕ್ಕೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಜಪಾನ್ ಪ್ರಧಾನಿ ಫುಮಿಯೊ ಕಿಶಿಡಾ ಹಾಗೂ ಕೆನಡ ಪ್ರಧಾನಿ ಜಸ್ಟಿನ್ ಟ್ರುಡೋ ಸೇರಿದಂತೆ  ಜಾಗತಿಕ ನಾಯಕರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ ಹಾಗೂ ಸಂತ್ರಸ್ತರ ಕುಟುಂಬಗಳಿಗೆ  ಸಾಂತ್ವಾನ ಹೇಳಿದ್ದಾರೆ.

ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್  ಟೆಲಿಗ್ರಾಮ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ  ಸಂದೇಶದಲ್ಲಿ   ಕನಿಷ್ಠ  ನೂರಾರು ಮಂದಿಯನ್ನು ಬಲಿತೆಗೆದುಕೊಂಡ ದುರಂತದ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.  ಈ  ಭೀಕರ ಅವಘಡದಲ್ಲಿ ತನ್ನ ಬಂಧುಗಳನ್ನು ಹಾಗೂ  ಪ್ರೀತಿಪಾತ್ರರನ್ನು ಕಳೆದುಕೊಂಡವರ ದುಃಖದಲ್ಲಿ ನಾವು ಸಹಭಾಗಿಗಳಾಗುವೆವು ಹಾಗೂ ಪ್ರತಿಯೊಬ್ಬ ಗಾಯಾಳು ತ್ವರಿತವಾಗಿ ಚೇತರಿಸಿಕೊಳ್ಳಬೇಕೆಂದು ನಾವು ಆಶಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಜಪಾನ್ ಪ್ರಧಾನಿ ಕಿಶಿಡಾ ಅವರು ಪ್ರಧಾನಿ ಕಳುಹಿಸಿರುವ ಸಂತಾಪ ಸಂದೇಶದಲ್ಲಿ,‘ಜಪಾನ್ ಹಾಗೂ ಅದರ ಜನತೆಯ ಪರವಾಗಿ  ಒಡಿಶಾದಲ್ಲಿ ಸಂಭವಿಸಿದ  ರೈಲು ಅವಘಡದಲ್ಲಿ ಮೃತಪಟ್ಟವರಿಗೆ ಹಾಗೂ ಅವರ ಶೋಕ ತಪ್ತ ಕುಟುಂಬಗಳಿಗೆ ಸಂತಾಪವನ್ನು ವ್ಯಕ್ತಪಡಿಸಲಿಚ್ಛೀಸುತ್ತೇ’ೆ ಎಂದು ಹೇಳಿದ್ದಾರೆ.

ಈ ಸಂಕಷ್ಟದ ಸಮಯದಲ್ಲಿ ಕೆನಡದ ಜನತೆ ಭಾರತೀಯರೊಂದಿಗಿದ್ದಾರೆಂದು ಕೆನಡ ಪ್ರಧಾನಿ ಜಸ್ಟಿನ್  ಟ್ರುಡೋ  ಟ್ವೀಟ್ ಮಾಡಿದ್ದಾರೆ.

ಈ ಮಧ್ಯೆ ಭಾರತಕ್ಕೆ ನಾಲ್ಕು ದಿನಗಳ ಪ್ರವಾಸದಲ್ಲಿರುವ ನೇಪಾಳ ಪ್ರಧಾನಿ ಪ್ರಚಂಡ ಅವರು ಒಡಿಶಾ ರೈಲು ದುರಂತಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ ಹಾಗೂ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.

ಪಾಕ್ ಪ್ರಧಾನಿ ಶಹಬಾಝ್ ಶರೀಫ್ ಅವರು  ರೈಲು ದುರಂತದ ಸಂತ್ರಸ್ತ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದು ಘಟನೆಯಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳುವಂತೆ ಹಾರೈಸಿದ್ದಾರೆ.

ಒಡಿಶಾದಲ್ಲಿ ಸಂಭವಿಸಿದ ರೈಲು ಅಪಘಾತದ ಸುದ್ದಿ ಕೇಳಿ ತನಗೆ ತೀವ್ರ ವಿಷಾದವಾಗಿದೆ ಎಂದು ಶ್ರೀಲಂಕಾ ವಿದೇಶಾಂಗ ಸಚಿವ ಅಲಿ ಸಾಬ್ರಿ ತಿಳಿಸಿದ್ದಾರೆ.

Similar News