ಮಹಿಳೆಯರ ಜೂನಿಯರ್ ಏಶ್ಯಕಪ್: ಸೆಮಿ ಫೈನಲ್‌ಗೆ ಭಾರತ

ಚೆನೀಸ್ ತೆಪೆ ವಿರುದ್ಧ ಭರ್ಜರಿ ಜಯ

Update: 2023-06-08 17:55 GMT

ಟೋಕಿಯೊ: ಚೈನೀಸ್ ತೈಪೆ ವಿರುದ್ಧ ತನ್ನ ಕೊನೆಯ ಗ್ರೂಪ್ ಪಂದ್ಯದಲ್ಲಿ 11-0 ಗೋಲುಗಳ ಅಂತರದಿಂದ ಜಯ ಸಾಧಿಸಿ ಅಮೋಘ ಪ್ರದರ್ಶನ ನೀಡಿರುವ ಭಾರತದ ಜೂನಿಯರ್ ಮಹಿಳಾ ಹಾಕಿ ತಂಡವು ಏಶ್ಯಕಪ್‌ನಲ್ಲಿ ಸೆಮಿ ಫೈನಲ್‌ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಂಡಿದೆ.

ಗುರುವಾರ ನಡೆದ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿರುವ ಭಾರತವು ಎ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದಿದೆ. ಗ್ರೂಪ್ ಹಂತದಲ್ಲಿ 3ರಲ್ಲಿ ಜಯ ಹಾಗೂ 1ರಲ್ಲಿ ಡ್ರಾ ಸಾಧಿಸಿರುವ ಭಾರತದ ತಂಡ ಈ ತನಕ ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡಿದೆ.

ಭಾರತದ ಪರ ವೈಷ್ಣವಿ ವಿಠಲ್ ಫಾಲ್ಕೆ(1ನೇ ನಿಮಿಷ), ದೀಪಿಕಾ(3ನೇ ನಿಮಿಷ), ಅನ್ನು(10ನೇ, 52ನೇ ನಿಮಿಷ), ಋತುಜಾ ದಾದಾಸೊ ಪಿಸಾಲ್(12ನೇ ನಿಮಿಷ), ನೀಲಂ(19ನೇ ನಿಮಿಷ), ಮಂಜು ಚೊರ್ಸಿಯಾ(33ನೇ ನಿಮಿಷ), ಸುನೆಲಿತಾ ಟೊಪ್ಪೊ(43ನೇ, 57ನೇ ನಿಮಿಷ), ದೀಪಿಕಾ ಸೊರೆಂಗ್(46ನೇ ನಿಮಿಷ) ಹಾಗೂ ಮುಮ್ತಾಝ್ ಖಾನ್(55ನೇ ನಿಮಿಷ)ಗೋಲು ಗಳಿಸಿದ್ದಾರೆ.

ಚೈನೀಸ್ ತೈಪೆ ವಿರುದ್ಧ ಆರಂಭದಿಂದಲೇ ನಿರಂತರ ದಾಳಿ ನಡೆಸುವ ಮೂಲಕ ಭಾರತ ತನ್ನ ಪ್ರಾಬಲ್ಯ ಪ್ರದರ್ಶಿಸಿತು. ವೈಷ್ಣವಿ 1ನೇ ನಿಮಿಷದಲ್ಲಿ ಫೀಲ್ಡ್ ಗೋಲು ಗಳಿಸಿ ಗೋಲಿನ ಸುರಿಮಳೆಗೆ ನಾಂದಿ ಹಾಡಿದರು. ಅನ್ನು ಹಾಗೂ ಸುನೆಲಿತಾ ಟೊಪ್ಪೊ ಅವಳಿ ಗೋಲು ಗಳಿಸಿ ಗಮನ ಸೆಳೆದರು.

ಭಾರತ ಶನಿವಾರ ನಡೆಯಲಿರುವ ಸೆಮಿ ಫೈನಲ್‌ನಲ್ಲಿ ಜಪಾನ್ ಇಲ್ಲವೇ ಕಝಕ್‌ಸ್ತಾನವನ್ನು ಎದುರಿಸಲಿದೆ. ತನ್ನ ಶ್ರೇಷ್ಠ ಫಾರ್ಮ್ ಮುಂದುವರಿಸಿ ಏಶ್ಯಕಪ್ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಗುರಿ ಇಟ್ಟುಕೊಂಡಿದೆ.

Similar News