ಎಫ್‌ಐಎಚ್ ಪ್ರೊ ಲೀಗ್ ಪಂದ್ಯ: ಅರ್ಜೆಂಟೀನ ವಿರುದ್ಧ ಭಾರತ ಜಯಭೇರಿ

Update: 2023-06-09 17:48 GMT

ಆ್ಯಮ್‌ಸ್ಟರ್‌ಡಮ್: ನೆದರ್‌ಲ್ಯಾಂಡ್ಸ್ ವಿರುದ್ಧ ಸೋಲಿನಿಂದ ಬೇಗನೆ ಚೇತರಿಸಿಕೊಂಡಿರುವ ಭಾರತದ ಪುರುಷರ ಹಾಕಿ ತಂಡ ಗುರುವಾರ ರಾತ್ರಿ ನಡೆದ ಅರ್ಜೆಂಟೀನ ವಿರುದ್ಧದ ಎಫ್‌ಐಎಚ್ ಪ್ರೊ ಲೀಗ್ ಪಂದ್ಯದಲ್ಲಿ 3-0 ಗೋಲುಗಳ ಅಂತರದಿಂದ ಜಯಭೇರಿ ಬಾರಿಸಿದೆ.

ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತವು ಆತಿಥೇಯ ನೆದರ್‌ಲ್ಯಾಂಡ್ಸ್ ವಿರುದ್ಧ 1-4 ಅಂತರದಿಂದ ಸೋತಿತ್ತು. ಆದರೆ, ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದ ಭಾರತವು ತನ್ನದೇ ಶೈಲಿಯಲ್ಲಿ ಮರು ಹೋರಾಟ ನೀಡಿ ಅರ್ಜೆಂಟೀನವನ್ನು ಮಣಿಸಿದೆ.

 ಮುಂಚೂಣಿಯಲ್ಲಿ ನಿಂತು ತಂಡವನ್ನು ಮುನ್ನಡೆಸಿದ ಹರ್ಮನ್‌ಪ್ರೀತ್ 33ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸಿ ಆರಂಭಿಕ ಮುನ್ನಡೆ ಒದಗಿಸಿದರು. ಪ್ರೊ ಲೀಗ್‌ನಲ್ಲಿ ಒಟ್ಟು 18ನೇ ಗೋಲು ಗಳಿಸಿದರು.

ಅಮಿತ್ ರೋಹಿದಾಸ್ ಕೂಡ 39ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸಿದರು. 59ನೇ ನಿಮಿಷದಲ್ಲಿ ಫೀಲ್ಡ್ ಗೋಲ್ ಮೂಲಕ ಅಭಿಷೇಕ್ ಭಾರತಕ್ಕೆ 3-0 ಅಂತರದಿಂದ ಗೆಲುವು ತಂದುಕೊಟ್ಟರು. ಈ ಗೆಲುವಿನ ಮುಖಾಂತರ 14 ಪಂದ್ಯಗಳಲ್ಲಿ 27 ಅಂಕ ಕಲೆ ಹಾಕಿದ ಭಾರತವು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ. ಗ್ರೇಟ್ ಬ್ರಿಟನ್(12 ಪಂದ್ಯಗಳಲ್ಲಿ 26 ಅಂಕ)ಎರಡನೇ ಸ್ಥಾನದಲ್ಲಿದೆ.

ಭಾರತವು ಶನಿವಾರ ನೆದರ್‌ಲ್ಯಾಂಡ್ಸ್ ತಂಡವನ್ನು ಮುಖಾಮುಖಿಯಾಗಲಿದೆ.

Similar News