×
Ad

ಇಂಡೋನೇಶ್ಯ ಓಪನ್: ಸಿಂಧು, ಪ್ರಣಯ್ ಪ್ರಿ-ಕ್ವಾರ್ಟರ್ ಫೆನಲ್‌ಗೆ

ಟ್ರೀಸಾ-ಗಾಯತ್ರಿಗೆ ಸೋಲು

Update: 2023-06-13 22:55 IST

ಜಕಾರ್ತ: ಭಾರತದ ಸ್ಟಾರ್ ಶಟ್ಲರ್ ಪಿ.ವಿ. ಸಿಂಧು ಇಂಡೋನೇಶ್ಯ ಓಪನ್ ವರ್ಲ್ಡ್ ಟೂರ್ ಸೂಪರ್ 1000 ಸ್ಪರ್ಧೆಯಲ್ಲಿ ಮೊದಲ ಸುತ್ತಿನಲ್ಲಿ ಸ್ಥಳೀಯ ಫೇವರಿಟ್ ಗ್ರೆಗೊರಿಯ ಮರಿಸ್ಕಾರನ್ನು ನೇರ ಗೇಮ್‌ಗಳ ಅಂತರದಿಂದ ಮಣಿಸಿ ಮೊದಲಿನ ಲಯಕ್ಕೆ ಮರಳಿದರು.

ಮಂಗಳವಾರ 38 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಡಬಲ್ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು ಇಂಡೋನೇಶ್ಯದ ಎದುರಾಳಿಯನ್ನು 21-19, 21-15 ಅಂತರದಿಂದ ಮಣಿಸಿದರು. ಈ ಮೂಲಕ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಂಡರು. ಸಿಂಧು ಇದೇ ಮೊದಲ ಬಾರಿ ಮರಿಸ್ಕಾ ವಿರುದ್ಧ ಜಯ ಸಾಧಿಸಿದರು. ಈ ವರ್ಷಾರಂಭದಲ್ಲಿ ಎರಡು ಬಾರಿ ಮರಿಸ್ಕಾ ವಿರುದ್ಧ ಮ್ಯಾಡ್ರಿಡ್ ಮಾಸ್ಟರ್ಸ್ ಫೈನಲ್ ಹಾಗೂ ಮಲೇಶ್ಯ ಮಾಸ್ಟರ್ಸ್ ಸೆಮಿ ಫೈನಲ್‌ನಲ್ಲಿ ಸಿಂಧು ಸೋತಿದ್ದರು.

ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್‌ನಲ್ಲಿ 13ನೇ ಸ್ಥಾನಕ್ಕೆ ಕುಸಿದಿರುವ ಸಿಂಧು ಇಂದು ಮೊದಲ ಗೇಮ್‌ನಲ್ಲಿ ಕಠಿಣ ಸವಾಲು ಎದುರಿಸಿದರು. ಅಂತಿಮವಾಗಿ 21-19ರಿಂದ ಮೊದಲ ಗೇಮ್ ಗೆದ್ದುಕೊಂಡರು. 2ನೇ ಗೇಮ್‌ನಲ್ಲಿ ಮರಿಸ್ಕಾ ಹೆಚ್ಚು ತಪ್ಪು ಮಾಡುವಂತೆ ಪ್ರೇರೇಪಿಸಿದ ಸಿಂಧು 21-15 ಅಂತರದಿಂದ ಜಯ ದಾಖಲಿಸಿದರು. ಸಿಂಧು ಮುಂದಿನ ಸುತ್ತಿನಲ್ಲಿ ಮೂರನೇ ಶ್ರೇಯಾಂಕದ ತೈ ಝು ಯಿಂಗ್‌ರನ್ನು ಎದುರಿಸಲಿದ್ದಾರೆ.

ತೈವಾನ್ ಸ್ಟಾರ್ ಆಟಗಾರ್ತಿ ಯಿಂಗ್ ಭಾರತದ ಸಿಂಧು ವಿರುದ್ಧ 8 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಒಟ್ಟಾರೆ ಹೆಡ್-ಟು-ಹೆಡ್ ದಾಖಲೆಯಲ್ಲಿ 18-5 ಮುನ್ನಡೆಯಲ್ಲಿದ್ದಾರೆ.

ಪ್ರಣಯ್ ಗೆಲುವಿನಾರಂಭ: ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ ಫಾರ್ಮ್‌ನಲ್ಲಿರುವ ಆಟಗಾರ ಎಚ್.ಎಸ್. ಪ್ರಣಯ್ ಜಪಾನ್‌ನ ಕೆಂಟಾ ನಿಶಿಮೊಟೊರನ್ನು 50 ನಿಮಿಷಗಳ ಹಣಾಹಣಿಯಲ್ಲಿ 21-16, 21-14 ಅಂತರದಿಂದ ಸೋಲಿಸಿದರು. ಈ ಮೂಲಕ ಟೂರ್ನಿಯಲ್ಲಿ ಗೆಲುವಿನ ಆರಂಭ ಪಡೆದರು.

ಕಳೆದ ತಿಂಗಳು ಮಲೇಶ್ಯ ಮಾಸ್ಟರ್ಸ್ ಸೂಪರ್-300 ಪ್ರಶಸ್ತಿಯನ್ನು ಗೆದ್ದುಕೊಂಡಿರುವ 7ನೇ ಶ್ರೇಯಾಂಕದ ಆಟಗಾರ ಪ್ರಣಯ್ ಅಂತಿಮ-16ರ ಸುತ್ತಿನಲ್ಲಿ ಹಾಂಕಾಂಗ್‌ನ ಕಾ ಲಾಂಗ್ ಅಂಗುಸ್‌ರನ್ನು ಎದುರಿಸಲಿದ್ದಾರೆ. ಭಾರತದ ಮಹಿಳಾ ಡಬಲ್ಸ್ ಜೋಡಿ ಟ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ಮೊದಲ ಸುತ್ತಿನಲ್ಲಿ ಸೋತು ನಿರ್ಗಮಿಸಿದರು.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ವಿಜೇತ ಟ್ರೀಸಾ-ಗಾಯತ್ರಿ ಜೋಡಿ 1 ಗಂಟೆ ಹಾಗೂ 12 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ ಜಪಾನ್‌ನ ರಿನ್ ಇವಾನಗಾ ಹಾಗೂ ಕೀ ನಕಾನಿಶಿ ಅವರ ವಿರುದ್ಧ 22-20, 12-21, 16-21 ಅಂತರದಿಂದ ಸೋತಿದ್ದಾರೆ.

Similar News