×
Ad

ವ್ಯಾಪಕ ಸೈಬರ್ ಬೇಹುಗಾರಿಕಾ ಅಭಿಯಾನಕ್ಕೆ ಚೀನಾದ ಸಂಪರ್ಕ: ವರದಿ

Update: 2023-06-16 21:37 IST

ವಾಷಿಂಗ್ಟನ್: ಚೀನಾದೊಂದಿಗೆ ಸ್ಪಷ್ಟ ಸಂಪರ್ಕ ಹೊಂದಿರುವ ಆನ್ಲೈನ್ ದಾಳಿಕೋರರು ಚೀನಾ ಆಸಕ್ತಿ ಹೊಂದಿರುವ ಸರಕಾರಿ ಏಜೆನ್ಸಿಗಳನ್ನು ಗುರಿಯಾಗಿಸಿಕೊಂಡ ವ್ಯಾಪಕ ಸೈಬರ್ ಬೇಹುಗಾರಿಕಾ ಅಭಿಯಾನದ ಹಿಂದೆ ಇದ್ದಾರೆ ಎಂದು ಗೂಗಲ್ ನ ಸಹಸಂಸ್ಥೆ ಮಾಂಡಿಯಾಂಟ್ ವರದಿ ಮಾಡಿದೆ.

ಇದು 2021ರ ಆರಂಭದಲ್ಲಿ ಮೈಕ್ರೊಸಾಫ್ಟ್ ಎಕ್ಸ್‌ಚೇಂಜ್‌ ನ ಪ್ರಕರಣದ ನಂತರ, ಚೀನಾಕ್ಕೆ ಸಂಬಂಧಿಸಿದ ಬೆದರಿಕೆ ಜಾಲದ ವ್ಯಾಪಕ ಸೈಬರ್ ಬೇಹುಗಾರಿಕೆಯಾಗಿದೆ ಎಂದು ಮ್ಯಾಂಡಿಯಾಂಟ್ ನ ಮುಖ್ಯ ತಾಂತ್ರಿಕ ಅಧಿಕಾರಿ ಚಾಲ್ರ್ಸ್ ಕಾರ್ಮಕಲ್ ಹೇಳಿದ್ದಾರೆ. ಸೈಬರ್ ದಾಳಿಕೋರರು ನೂರಾರು ಸಂಸ್ಥೆಗಳ ಕಂಪ್ಯೂಟರ್ ರಕ್ಷಣಾ ವ್ಯವಸ್ಥೆಯನ್ನು ಬೇಧಿಸಿದ್ದಾರೆ. 

ಕೆಲವು ಪ್ರಕರಣಗಳಲ್ಲಿ ಚೀನೀ ಸರಕಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಕೆಲಸ ಮಾಡುತ್ತಿರುವ ಪ್ರಮುಖ ಉದ್ಯೋಗಿಗಳ ಇ-ಮೇಲ್ಗಳನ್ನು ಕದಿಯುತ್ತಾರೆ. ಯುಎನ್ಸಿ4841 ಎಂದು ಉಲ್ಲೇಖಿಸಲಾದ ಗುಂಪು `ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ'ವನ್ನು ಬೆಂಬಲಿಸುವ ವ್ಯಾಪಕವಾದ ಬೇಹುಗಾರಿಕಾ ಅಭಿಯಾನದ ಹಿಂದೆ ಇದೆ ಎಂಬ ಬಗ್ಗೆ ವಿಶ್ವಾಸವಿದೆ. 

ಈ ಹ್ಯಾಕರ್ ಗಳು ಕನಿಷ್ಟ 16 ವಿವಿಧ ದೇಶಗಳಲ್ಲಿ ಬಲಿಪಶುಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ವಿಶ್ವದಾದ್ಯಂತ ಖಾಸಗಿ ಮತ್ತು ಸಾರ್ವಜನಿಕ ಸಂಸ್ಥೆಗಳಿಗೆ ಪ್ರಹಾರ ನೀಡುತ್ತಿದ್ದಾರೆ. ಚೀನಾ ಸರಕಾರಕ್ಕೆ ಮಹತ್ವವಾಗಿರುವ ಕಾರ್ಯನೀತಿ (ವಿಶೇಷವಾಗಿ ಏಶ್ಯಾ-ಪೆಸಿಫಿಕ್ ಪ್ರದೇಶ ಮತ್ತು ತೈವಾನ್ಗೆ ಸಂಬಂಧಿಸಿದ್ದು)ಯನ್ನು ಹ್ಯಾಕರ್ ಗಳು ಗುರಿಯಾಗಿಸಿಕೊಂಡಿದ್ದಾರೆ. ಬಲಿಪಶುಗಳಲ್ಲಿ ಹಾಂಕಾಂಗ್ ಮತ್ತು ತೈವಾನ್ ಮೂಲದ ವಿದೇಶಿ ಸಚಿವಾಲಯಗಳು, ಸಂಶೋಧನಾ ಸಂಸ್ಥೆಗಳು ಮತ್ತು ವಿದೇಶಿ ವ್ಯಾಪಾರ ನಿಯೋಗಗಳು ಸೇರಿವೆ  ಎಂದು ವರದಿ ಹೇಳಿದೆ.

ಅಪಾಯಕಾರಿ ಮತ್ತು ವಂಚನೆಯ, ದುರುದ್ದೇಶಪೂರಿತ ಕೋಡ್ ಹೊಂದಿರುವ  ಇ-ಮೇಲ್ ಸಂದೇಶಗಳನ್ನು ಸೈಬರ್ ದಾಳಿಕೋರರು ಬಳಸುತ್ತಾರೆ. ಸೈಬರ್ ಬೇಹುಗಾರಿಕೆ ಕೃತ್ಯಗಳು ಕಳೆದ ವರ್ಷದ ಅಕ್ಟೋಬರ್ನಲ್ಲಿ ಆರಂಭವಾಗಿರುವ ಸಾಧ್ಯತೆಯಿದೆ, ಆದರೆ ಇವು ಕಳೆದ ತಿಂಗಳು ಬೆಳಕಿಗೆ ಬಂದಿವೆ ಎಂದು ವರದಿ ಹೇಳಿದೆ. 2021ರಲ್ಲಿ ಮೈಕ್ರೊಸಾಫ್ಟ್ ಎಕ್ಸ್ಚೇಂಜ್ ನ ತಾಂತ್ರಿಕ ವ್ಯವಸ್ಥೆಯನ್ನು ಹ್ಯಾಕ್ ಮಾಡಿದ್ದರಿಂದ ಅಮೆರಿಕದ ಸ್ಥಳೀಯ ಆಡಳಿತ ಸೇರಿದಂತೆ ಕನಿಷ್ಟ 30,000 ಸಂಸ್ಥೆಗಳ ವ್ಯವಹಾರದ ಮೇಲೆ ಪರಿಣಾಮ ಬೀರಿತ್ತು.

ಅಮೆರಿಕದ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಚೀನಾ ಸೈಬರ್ ದಾಳಿ ನಡೆಸುತ್ತಿದೆ ಎಂದು ಅಮೆರಿಕ ಹಲವು ಬಾರಿ ಆರೋಪಿಸಿದೆ. ಸೈಬರ್ ದಾಳಿಯ ವಿಷಯವು ಇತ್ತೀಚಿನ ವರ್ಷಗಳಲ್ಲಿ ಎರಡು ಸೂಪರ್ ಪವರ್ ದೇಶಗಳ ನಡುವಿನ ಸಂಬಂಧ ಹದಗೆಡಲು ಕಾರಣವಾಗಿದೆ. ಆದರೆ ಈ ಪ್ರತಿಪಾದನೆಯನ್ನು ನಿರಾಕರಿಸಿರುವ ಚೀನಾ, ಅಮೆರಿಕದ ಮೇಲೆ ಪ್ರತ್ಯಾರೋಪ ಹೊರಿಸಿದೆ. ಕಳೆದ ವರ್ಷ ಅಮೆರಿಕದ ರಾಷ್ಟ್ರೀಯ ಭದ್ರತಾ ಏಜೆನ್ಸಿಯು ಚೀನಾದ ಸಂಸ್ಥೆಗಳನ್ನು ಗುರಿಯಾಗಿಸಿ ಸಾವಿರಾರು ದುರುದ್ದೇಶಪೂರಿತ ದಾಳಿಗಳನ್ನು ನಡೆಸಿದೆ ಎಂದು ಚೀನಾ ಆರೋಪಿಸಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಚೀನಾಕ್ಕೆ ಭೇಟಿ ನೀಡುವ ಸಂದರ್ಭದಲ್ಲೇ ಈ ವರದಿ ಬಿಡುಗಡೆಯಾಗಿದೆ.

16 ರಾಷ್ಟ್ರಗಳು ಹಿಟ್ ಲಿಸ್ಟ್ 

ಚೀನಾದೊಂದಿಗೆ ಸಂಪರ್ಕದಲ್ಲಿರುವ ಹ್ಯಾಕರ್ ಗಳು  ಕನಿಷ್ಟ 16 ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಮತ್ತು ವಿಶ್ವದಾದ್ಯಂತ ಸಾರ್ವಜನಿಕ ಮತ್ತು ಖಾಸಗಿ ವಲಯವೂ ಇವರ ಹಿಟ್ ಲಿಸ್ಟ್ ನಲ್ಲಿದೆ. ಇಂತಹ ಸಂಘಟನೆಗಳಲ್ಲಿ 55%ದಷ್ಟು ಅಮೆರಿಕದ ಸಂಸ್ಥೆಗಳಾಗಿದ್ದರೆ, 22%ದಷ್ಟು ಏಶ್ಯಾ ಪೆಸಿಫಿಕ್ ಮತ್ತು 24%ದಷ್ಟು ಯುರೋಪ್, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದ ಸಂಸ್ಥೆಗಳಾಗಿವೆ.

ವರದಿಯ ಪ್ರಕಾರ, ಜನಪ್ರಿಯ ಇ-ಮೇಲ್ ಭದ್ರತಾ ವ್ಯವಸ್ಥೆ `ಬರ್ರಕುಡ ಸಾಫ್ಟ್ವೇರ್'ನಲ್ಲಿನ ಲೋಪದೋಷವನ್ನು ಬಳಸಿಕೊಂಡು, ದುರುದ್ದೇಶಪೂರಿತ ಕೋಡ್ನೊಂದಿಗೆ ಇ-ಮೇಲ್ ಸಂದೇಶ ರವಾನಿಸುವುದು ಹ್ಯಾಕರ್ಗಳ ಕಾರ್ಯವೈಖರಿಯಾಗಿದೆ.

Similar News