×
Ad

ಉಕ್ರೇನ್ ಬಿಕ್ಕಟ್ಟು ಪರಿಹಾರಕ್ಕೆ ಪ್ರಯತ್ನ: ಪುಟಿನ್, ಝೆಲೆನ್ಸ್ಕಿ ಜತೆ ಆಫ್ರಿಕಾ ನಿಯೋಗದ ಸಭೆ

Update: 2023-06-16 21:45 IST

ಕೀವ್: 15 ತಿಂಗಳಿಂದ ನಡೆಯುತ್ತಿರುವ ಉಕ್ರೇನ್ ಯುದ್ಧಕ್ಕೆ ಮಾತುಕತೆಯ ಮೂಲಕ ಪರಿಹಾರ ರೂಪಿಸುವ ಪ್ರಯತ್ನ ಮುಂದುವರಿಸಿರುವ ಆಫ್ರಿಕಾದ ಮುಖಂಡರ ನಿಯೋಗ ಶುಕ್ರವಾರ ಉಕ್ರೇನ್ ಗೆ ಆಗಮಿಸಿ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಶುಕ್ರವಾರ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಮಫೋಸ ಉಕ್ರೇನ್ ಗೆ ಆಗಮಿಸಿದಾಗ ಬುಚ ನಗರದ ಬಳಿಯ ರೈಲುನಿಲ್ದಾಣದಲ್ಲಿ ಅವರನ್ನು ಉಕ್ರೇನ್ ನ ವಿಶೇಷ ಪ್ರತಿನಿಧಿ ಮತ್ತು ಉಕ್ರೇನ್ ಗೆ ದಕ್ಷಿಣ ಆಫ್ರಿಕಾದ ರಾಯಭಾರಿ ಸ್ವಾಗತಿಸಿದರು. ಝಾಂಬಿಯಾ, ಸೆನೆಗಲ್, ಉಗಾಂಡಾ, ಈಜಿಪ್ಟ್, ಕಾಂಗೊ ಗಣರಾಜ್ಯ ಮತ್ತು ಕೊಮೊರೊ ದ್ವೀಪದ ಹಿರಿಯ ಮುಖಂಡರು ಅವರ ಜತೆಗಿದ್ದರು. ಉಕ್ರೇನ್ ಅಧ್ಯಕ್ಷರ ಜತೆ ಮಾತುಕತೆ ನಡೆಸಿದ ಬಳಿಕ ಶುಕ್ರವಾರ ರಾತ್ರಿ ರಶ್ಯದ ಸೇಂಟ್ ಪೀಟರ್ಸ್ಬರ್ಗ್ ಗೆ ಈ ನಿಯೋಗ ತೆರಳಲಿದೆ. ಅಲ್ಲಿ ರಶ್ಯದ ಉನ್ನತ ಅಂತರಾಷ್ಟ್ರೀಯ ಆರ್ಥಿಕ ಸಮಾವೇಶ ನಡೆಯುತ್ತಿದ್ದು ಅಧ್ಯಕ್ಷ ಪುಟಿನ್ ಭಾಗವಹಿಸಿದ್ದಾರೆ. ಶನಿವಾರ  ಅವರೊಂದಿಗೆ ಮಾತುಕತೆ ನಡೆಸಲು ಉದ್ದೇಶಿಸಲಾಗಿದೆ.

ಶಾಂತಿ ಪ್ರಕ್ರಿಯೆ ಪ್ರಾರಂಭಿಸುವ ಉದ್ದೇಶದ ಜತೆ, ಆಫ್ರಿಕಾ ದೇಶಗಳಿಗೆ ತುರ್ತು ಅಗತ್ಯವಿರುವ ರಸಗೊಬ್ಬರವನ್ನು ರಶ್ಯ ರಫ್ತು ಮಾಡಿದರೆ ಪಾವತಿಸುವ ವಿಧಾನದ ಬಗ್ಗೆಯೂ ಚರ್ಚೆ ನಡೆಸಲು ಉದ್ದೇಶಿಸಲಾಗಿದೆ. ಉಕ್ರೇನ್ ಆಕ್ರಮಣದ ಬಳಿಕ ರಶ್ಯದ ವಿರುದ್ಧ ಪಾಶ್ಚಿಮಾತ್ಯರು ನಿರ್ಬಂಧ ಜಾರಿಗೊಳಿಸಿರುವುದರಿಂದ ಈ ಸಮಸ್ಯೆ ಉದ್ಭವಿಸಿದೆ. ಉಕ್ರೇನ್ನಿಂದ ಇನ್ನಷ್ಟು ಆಹಾರ ಧಾನ್ಯ ರಫ್ತಿಗೆ ಅವಕಾಶ, ರಶ್ಯ ಮತ್ತು ಉಕ್ರೇನ್ಗಳು ಇನ್ನಷ್ಟು ಕೈದಿಗಳ ವಿನಿಮಯ ನಡೆಸುವುದನ್ನೂ ಖಾತರಿ ಪಡಿಸುವ ಉದ್ದೇಶವಿದೆ.

ಈ ಮಧ್ಯೆ, ತನ್ನ ನೆಲದಿಂದ ರಶ್ಯದ ಪಡೆಯನ್ನು ಹಿಮ್ಮೆಟ್ಟಿಸಲು   ಪಾಶ್ಚಿಮಾತ್ಯರು ಒದಗಿಸಿದ ಅತ್ಯಾಧುನಿಕ ಶಸ್ತ್ರಾಸ್ತ್ರ ಬಳಸಿ ಉಕ್ರೇನ್ ಪ್ರತಿದಾಳಿ ತೀವ್ರಗೊಳಿಸಿದೆ. ದಕ್ಷಿಣ ಮತ್ತು ಪೂರ್ವಪ್ರಾಂತದ ಮೂರು ಮುಂಚೂಣಿ ನೆಲೆಗಳಲ್ಲಿ ಉಕ್ರೇನ್ ಪಡೆ ಮುನ್ನಡೆ ಸಾಧಿಸಿದೆ. ಝಪೋರಿಝಿಯಾ ಪ್ರಾಂತದ ಒರಿಖಿವ್ ನಗರದಿಂದ ಮುಂದೆ ಸಾಗಿರುವ ಸೇನೆ ರೊಬೊಟೈನ್ ನಗರದತ್ತ ಸಾಗುತ್ತಿದೆ ಎಂದು ಉಕ್ರೇನ್ ಸೇನೆಯ ವಕ್ತಾರರು ಹೇಳಿದ್ದಾರೆ.

Similar News