ಬೆಂಗಳೂರು | ಉದ್ಯಮಿಯ 2 ಕೋಟಿ ರೂ. ನಗದು ದರೋಡೆ : ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ | PC : freepik.
ಬೆಂಗಳೂರು : ಸಿನಿಮೀಯ ಮಾದರಿಯಲ್ಲಿ ಉದ್ಯಮಿಯೊಬ್ಬರ ಎರಡು ಕೋಟಿ ರೂಪಾಯಿ ನಗದು ದರೋಡೆ ಮಾಡಿರುವ ಘಟನೆ ಇಲ್ಲಿನ ವಿದ್ಯಾರಣ್ಯಪುರ ಠಾಣೆ ವ್ಯಾಪ್ತಿಯ ಎಂ.ಎಸ್.ಪಾಳ್ಯದಲ್ಲಿ ನಡೆದಿದೆ.
ಹಣ ಕಳೆದುಕೊಂಡ ಉದ್ಯಮಿ ಶ್ರೀಹರ್ಷ ವಿ. ಎಂಬುವರು ನೀಡಿದ ದೂರಿನನ್ವಯ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಂಗೇರಿ ಮೂಲದ ಶ್ರೀಹರ್ಷ ತಮ್ಮ ಉದ್ಯಮಕ್ಕೆ ಅಗತ್ಯವಿರುವ ಯಂತ್ರವೊಂದನ್ನು ಜರ್ಮನಿಯಿಂದ ಆಮದು ಮಾಡಿಕೊಳ್ಳಬೇಕಿದ್ದುದರಿಂದ 2 ಕೋಟಿ ರೂ. ಹಣವನ್ನು ಯುಎಸ್‍ಡಿಐಟಿಗೆ ಕನ್ವರ್ಟ್ ಮಾಡಿಸಿಕೊಳ್ಳಬೇಕಿತ್ತು. ಈ ಸಂದರ್ಭದಲ್ಲಿ ತನ್ನ ಸ್ನೇಹಿತರೊಬ್ಬರ ಮೂಲಕ ಶ್ರೀಹರ್ಷ ಅವರಿಗೆ ಬೆಂಜಮಿನ್ ಹರ್ಷ ಎಂಬಾತನ ಪರಿಚಯವಾಗಿತ್ತು. ಯುಎಸ್‍ಡಿಐಟಿಗೆ ಹಣ ಕನ್ವರ್ಟ್ ಮಾಡಿಸುವ ಸಲುವಾಗಿ ಚರ್ಚಿಸಿದಾಗ ಎಂ.ಎಸ್. ಪಾಳ್ಯದಲ್ಲಿರುವ ಎ.ಕೆ. ಎಂಟರ್‍ಪ್ರೈಸಸ್ ಬಳಿ ಬರುವಂತೆ ಬೆಂಜಮಿನ್ ಹರ್ಷ ಸೂಚಿಸಿದ್ದ. ಅದರಂತೆ ಜೂನ್ 25ರಂದು ಮಧ್ಯಾಹ್ನ 3 ಗಂಟೆಗೆ ಎಂ.ಎಸ್.ಪಾಳ್ಯದ ಎ.ಕೆ. ಎಂಟರ್ ಪ್ರೈಸಸ್‍ನಲ್ಲಿ ಬೆಂಜಮಿನ್ ಹರ್ಷ ಹಾಗೂ ಶ್ರೀಹರ್ಷ ಭೇಟಿಯಾಗಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.
ಉದ್ಯಮಿ ಶ್ರೀಹರ್ಷ, ಬೆಂಜಮಿನ್ ಹರ್ಷ ಮತ್ತು ಆತನ ಇಬ್ಬರು ಸ್ನೇಹಿತರು 2 ಕೋಟಿ ರೂ. ಹಣ ಎಣಿಕೆ ಮಾಡುತ್ತಿದ್ದಾಗ ಏಕಾಏಕಿ ಅಂಗಡಿಗೆ ನುಗ್ಗಿದ್ದ 6-7 ಜನರು ಚಾಕುವಿನಿಂದ ಶ್ರೀಹರ್ಷ ಅವರ ಮೇಲೆ ಹಲ್ಲೆಗೈದಿದ್ದಾರೆ. ಬಳಿಕ ಕುತ್ತಿಗೆಗೆ ಚಾಕು ಇಟ್ಟು ಬೆಂಜಮಿನ್ ಹರ್ಷ, ಶ್ರೀಹರ್ಷ ಮತ್ತು ಅವರ ಸ್ನೇಹಿತರನ್ನು ರೂಮ್‍ನಲ್ಲಿ ಕೂಡಿ ಹಾಕಿ, 2 ಕೋಟಿ ರೂ. ಹಣವನ್ನು ಚೀಲಕ್ಕೆ ತುಂಬಿಕೊಂಡು ಪರಾರಿಯಾಗಿದ್ದಾರೆ. ಕೊನೆಗೆ ಕಷ್ಟಪಟ್ಟು ರೂಮ್ ಬಾಗಿಲು ಹಾಗೂ ಶಟರ್ ತೆರೆದಾಗ ಬೆಂಜಮಿನ್ ಹರ್ಷ ಮತ್ತು ಅವರ ಸ್ನೇಹಿತರು ಸಹ ದಿಢೀರನೇ ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ಉದ್ಯಮಿ ಶ್ರೀಹರ್ಷ ದೂರಿನಲ್ಲಿ ಆರೋಪಿಸಿದ್ದಾರೆ.
ಸದ್ಯ ಉದ್ಯಮಿ ಶ್ರೀಹರ್ಷ ನೀಡಿರುವ ದೂರಿನನ್ವಯ ಅಪರಿಚಿತ ವ್ಯಕ್ತಿಗಳು, ಬೆಂಜಮಿನ್ ಹರ್ಷ ಮತ್ತು ಅವರ ಸ್ನೇಹಿತರ ವಿರುದ್ಧ ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ಈಗಾಗಲೇ ಬೆಂಜಮಿನ್ ಹರ್ಷ ಮತ್ತು ಆತನ ಸ್ನೇಹಿತರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.