ಕೆಮ್ಮಿನ ಸಿರಪ್ ಮೇಲೆ ರಾಜ್ಯದಲ್ಲಿ ನಿಗಾ ವಹಿಸಲು ಸೂಚನೆ : ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು, ಅ. 5: ವಿವಿಧ ರಾಜ್ಯಗಳಲ್ಲಿ ಮಕ್ಕಳ ಸಾವಿಗೆ ಕಾರಣವಾಗಿದೆ ಎನ್ನಲಾದ ಕೆಮ್ಮಿನ ಸಿರಪ್‍ಗಳ ಮೇಲೆ ಕರ್ನಾಟಕ ರಾಜ್ಯದಲ್ಲೂ ನಿಗಾ ವಹಿಸುವಂತೆ ರಾಜ್ಯದ ಔಷಧಿ ನಿಯಂತ್ರಣ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜಸ್ಥಾನ, ಮಧ್ಯಪ್ರದೇಶ ಸೆರಿದಂತೆ ಇನ್ನಿತರ ರಾಜ್ಯಗಳಲ್ಲಿ ಕೆಮ್ಮಿನ ಸಿರಪ್‍ನಿಂದಾಗಿ ಮಕ್ಕಳು ಮೃತಪಟ್ಟ ಪ್ರಕರಣಗಳ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲೂ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಪೋಷಕರು ಆತಂಕಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.
ನಮ ರಾಜ್ಯಕ್ಕೆ ಕಾಲ್ಡ್ರಿಫ್ ಕೆಮ್ಮಿನ ಸಿರಪ್ ಪೂರೈಕೆ ಆಗಿಲ್ಲ. ಖಾಸಗಿಯಾಗಿ ತರಿಸಿಕೊಂಡಿದ್ದಾರಾ ಎಂಬ ಬಗ್ಗೆ ಪರೀಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿ ಬೇರೆ ಬ್ರಾಂಡ್‍ಗಳ ಕೆಮ್ಮಿನ ಸಿರಪ್‍ಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ನಂತರ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ಅವರು ತಿಳಿಸಿದರು.
ತಮಿಳುನಾಡಿನ ಕೆಲ ಜಿಲ್ಲೆಗಳಿಗೆ ಮಾತ್ರ ಕೆಮ್ಮಿನ ಮೇಲ್ಕಂಡ ಸಿರಪ್ ಸರಬರಾಜಾಗಿದ್ದು, ಲ್ಯಾಬ್ ವರದಿಗಳಲ್ಲಿ ಔಷಧಿಯಿಂದ ತೊಂದರೆಯಾಗಿರುವುದು ದೃಢಪಟ್ಟಿದೆ. ಇದರ ಪರಿಣಾಮವಾಗಿ ಔಷಧಿ ತಯಾರಿಕೆ ನಿಲ್ಲಿಸಲಾಗಿದೆ. ದೇಶಾದ್ಯಂತ ಕಾಲ್ಡ್ರಿಫ್ ಸಿರಪ್‍ನ ಮಾರಾಟ ನಿಷೇಧಿಸಲಾಗಿದ್ದು, ಜನರಿಗೆ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.