ಸಚಿವ ಆರ್.ಬಿ.ತಿಮ್ಮಾಪುರ ರಾಜೀನಾಮೆಗೆ ಬಿಜೆಪಿ ಆಗ್ರಹ
ಆರ್.ಬಿ.ತಿಮ್ಮಾಪುರ
ಬೆಂಗಳೂರು : ಅಬಕಾರಿ ಇಲಾಖೆಯಲ್ಲಿ ಸಿಎಲ್ - 7 ಲೈಸೆನ್ಸ್ ನೀಡಲು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹಾಗೂ ಅವರ ಪುತ್ರ, ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾದ ಆಡಿಯೋವೊಂದನ್ನು ರಾಜ್ಯ ಬಿಜೆಪಿ ಬಿಡುಗಡೆ ಮಾಡಿದೆ.
ಈ ಸಂಬಂಧ ಪಕ್ಷದ ಕಚೇರಿಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್,ಛಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಸಚಿವ ತಿಮ್ಮಾಪುರ ಪರವಾಗಿ ಅಧಿಕಾರಿ ಮಧ್ಯವರ್ತಿಗಳಿಂದ ಲಂಚ ಕೇಳಿದ್ದಾರೆ ಎನ್ನಲಾದ ಆಡಿಯೋ ಸಂಭಾಷಣೆಯನ್ನು ಈ ವೇಳೆ ಬಿಡುಗಡೆ ಮಾಡಿದರು.
ಈ ಬಗ್ಗೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ''ತಿಮ್ಮಾಪುರ ಅವರು ಅಧಿಕಾರದಲ್ಲಿಒಂದೇ ಒಂದು ಕ್ಷಣವೂ ಮುಂದುವರಿಯಬಾರದು. ಕಳಂಕ ಬರಬಾರದೆಂದರೆ ಇಂತಹ ಕಳಂಕಿತ ಸಚಿವರನ್ನು ಸಂಪುಟದಿಂದ ಕಿತ್ತು ಹಾಕುವ ಧೈರ್ಯ ತೋರಬೇಕು. ಅಬಕಾರಿ ಡಿಸಿ ಜಗದೀಶ್, ಸೂಪರಿಂಡೆಂಟ್ ತಮ್ಮಣ್ಣ ಮತ್ತು ಲಕ್ಕಪ್ಪ ಗಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಆಡಿಯೋದಲ್ಲಿ ಸಚಿವರಿಗೆ ತಿಂಗಳಿಗೆ ಎಷ್ಟೆಷ್ಟು ಲಂಚ ಕೊಡಬೇಕು? ಕೊಡದಿದ್ದರೆ ಲೈಸೆನ್ಸ್ ಹೇಗೆ ವಿಳಂಬ ಮಾಡುತ್ತಾರೆ ಎಂಬುದನ್ನು ಅವರೇ ಬಾಯಿ ಬಿಟ್ಟಿದ್ದಾರೆ. ಇದಕ್ಕಿಂತ ಇನ್ನೇನು ದಾಖಲೆ ಬೇಕು? ಸಿಎಲ್-7 ಒಟ್ಟು 750 ಲೈಸೆನ್ಸ್ ನೀಡಿದ್ದಾರೆ. ಪ್ರತಿ ಸಿಎಲ್-7ಗೆ ಒಂದೂವರೆ ಕೋಟಿ ಲಂಚಕ್ಕೆ ಬೇಡಿಕೆಗಳಿವೆ. 650 ಸಿಎಲ್-2 ಸನ್ನದುಗಳು ಒಂದೂವರೆ ಕೋಟಿಗೆ ಹರಾಜು ಮಾಡಲಾಗಿದೆ. ಇದರಿಂದ 950 ಕೋಟಿ ಕಿಕ್‌ಬ್ಯಾಕ್ ಒಂದು ಮೈಕ್ರೋಬ್ರೆವರಿಗಳಿಗೆ 2.50 ಕೋಟಿ ರೂ. ವಸೂಲಿ ಮಾಡಲಾಗಿದೆ" ಎಂದು ಆರೋಪಿಸಿದ್ದಾರೆ.
"ಒಟ್ಟು ರಾಜ್ಯದಲ್ಲಿ550 ಮೈಕ್ರೋ ಬ್ರೆವರಿಗಳಿವೆ. ಇಷ್ಟು ಹಣ ಯಾರ ಜೇಬು ಸೇರಿದೆ. ನಾವು ಏನೇ ಆರೋಪ ಮಾಡಿದರೂ ಸಾಕ್ಷಿ ಕೊಡಿ ಎನ್ನುತ್ತಿದ್ದರು. ಈಗ ಸಾಕ್ಷಿ ಸಮೇತ ಆಡಿಯೋ ಬಿಡುಗಡೆ ಮಾಡಿದ್ದೇವೆ. ಸಚಿವರಿಗೆ ತಿಂಗಳಿಗೆ ಇಂತಿಷ್ಟು ಕೊಡಬೇಕೆಂದು ಆಡಿಯೋದಲ್ಲಿಅಬಕಾರಿ ಡಿಸಿಯೇ ಹೇಳಿದ್ದಾರೆ. ಇದಕ್ಕಿಂತ ಸಾಕ್ಷಿ ಬೇಕಾ?,'' ಎಂದು ಕೇಳಿದ್ದಾರೆ.