‘ಸಂಪುಟ ಪುನರ್ ರಚನೆ’ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ: ಝಮೀರ್ ಅಹ್ಮದ್ ಖಾನ್
ಬೆಂಗಳೂರು, ಅ.17: ಸಚಿವ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಸಚಿವ ಸ್ಥಾನ ಬಿಟ್ಟುಕೊಡುವಂತೆ ನಮ್ಮ ಹೈಕಮಾಂಡ್ ಹೇಳಿದರೆ, ಸಂತೋಷದಿಂದ ಬಿಟ್ಟುಕೊಡುತ್ತೇನೆ. ನಮ್ಮದು ಹೈಕಮಾಂಡ್ ಇರುವ ಪಕ್ಷ, ಅವರು ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಚಿವನಾಗಿ ಮುಂದುವರೆಯುತ್ತೇನೆ ಎಂಬ ವಿಶ್ವಾಸವಿದೆ. ಆದರೂ, ಸಂಪುಟದಲ್ಲಿ ಯಾರು ಇರಬೇಕು, ಯಾರನ್ನೂ ಕೈ ಬಿಡಬೇಕು ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳುವುದು ಹೈಕಮಾಂಡ್ ಎಂದು ಹೇಳಿದರು.
ನನಗೆ ಎರಡೂವರೆ ವರ್ಷ ಅವಕಾಶ ಮಾಡಿಕೊಟ್ಟಿದ್ದಾರೆ. ಇನ್ನು ಉಳಿದ ಎರಡೂವರೆ ವರ್ಷಕ್ಕೆ ಬೇರೆಯವರಿಗೆ ಅವಕಾಶ ಕೊಡುವುದಿದ್ದರೆ ನಾನು ಸಂತೋಷವಾಗಿಯೇ ಸಚಿವ ಸ್ಥಾನ ಬಿಟ್ಟು ಕೊಡುತ್ತೇನೆ. ಹೈಕಮಾಂಡ್ ಹಾಕುವ ಗೆರೆಯನ್ನು ನಾನು ದಾಟುವುದಿಲ್ಲ. ಪಕ್ಷ ಕೊಡುವಂತಹ ಯಾವುದೆ ಜವಾಬ್ದಾರಿಯನ್ನು ನಿರ್ವಹಿಸಲು ನಾನು ಸಿದ್ಧ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ಮುಖ್ಯಮಂತ್ರಿ-ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಇಲ್ಲ: ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿದ್ದಾರೆ. ಐದು ವರ್ಷ ನಾನೆ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದೇನೆ ಎಂದು ಅವರೇ ಸ್ವತಃ ಹೇಳಿದ್ದಾರೆ. ಅವರನ್ನು ಬದಲಾವಣೆ ಮಾಡುವುದು ನಮ್ಮ ಕೈಯಲ್ಲಿ ಇಲ್ಲ. ಅದು ಸಹ ಹೈಕಮಾಂಡ್ ಕೈಯಲ್ಲೆ ಇರುವುದು. ಅದೇ ರೀತಿ ಕೆಪಿಸಿಸಿ ಅಧ್ಯಕ್ಷರ ಹುದ್ದೆಯೂ ಖಾಲಿ ಇಲ್ಲ. ಡಿ.ಕೆ.ಶಿವಕುಮಾರ್ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.