×
Ad

ಬಳ್ಳಾರಿಯನ್ನು ದೇಶದ ಮಾರುಕಟ್ಟೆಯ ಎರಡನೇ ಅತಿ ದೊಡ್ಡ ಹಬ್ ಮಾಡಲು ಪ್ರಯತ್ನ : ಸಂಸದ ಇ.ತುಕಾರಾಂ

Update: 2025-08-28 20:41 IST

ಬಳ್ಳಾರಿ, ಆ. 28: ಬಳ್ಳಾರಿಯನ್ನು ದೇಶದ ಮಾರುಕಟ್ಟೆಯ ಎರಡನೇ ಅತಿ ದೊಡ್ಡ ಮಾಡಲು ಎಲ್ಲಾ ರೀತಿಯ ಪ್ರಯತ್ನಗಳು ನಡೆಯುತ್ತಿವೆ ಎಂದು ಸಂಸದ ಇ.ತುಕಾರಾಂ ಅವರು ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನವೀಕೃತ ಕಟ್ಟಡ, ಲಿಫ್ಟ್ ಅನ್ನು ಗುರುವಾರ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಬಳ್ಳಾರಿ ಜಿಲ್ಲೆಯು ಭೌಗೋಳಿಕವಾಗಿ ಭಿನ್ನವಾಗಿದೆ. ಸಂಡೂರು ತಾಲೂಕಿನಲ್ಲಿ ಮ್ಯಾಂಗನೀಸ್, ಕಬ್ಬಿಣದ ಅದಿರು, ಕಂಪ್ಲಿ, ಕುರುಗೋಡು ಮತ್ತು ಸಿರುಗುಪ್ಪ ತಾಲೂಕಿನಲ್ಲಿ ತುಂಗಭದ್ರಾ ನದಿ ಮತ್ತು ನೀರಿದೆ. ಬಳ್ಳಾರಿಯನ್ನು ಸಹಜವಾಗಿಯೇ ಬಾಂಬೆಯ ನಂತರ, ದೇಶದ ಎರಡನೇ `ಮಾರ್ಕೆಟಿಂಗ್ ಹಬ್’ ಮಾಡುವ ಪ್ರಯತ್ನ ನಡೆದಿದೆ ಎಂದರು.

ಹೊಸಪೇಟೆ - ಬಳ್ಳಾರಿಗೆ ಹೆಚ್ಚುವರಿ ಗೂಡ್ಸ್ ಮಾರ್ಗಕ್ಕೆ ಅನುಮೋದನೆ ಸಿಕ್ಕಿದ್ದು, ಈ ಮಾರ್ಗ ನಿರ್ಮಾಣದ ಸಂದರ್ಭದಲ್ಲಿ ಅನೇಕ ರೈಲ್ವೆ ಮೇಲು ಸೇತುವೆಗಳ ನಿರ್ಮಾಣವೂ ಆಗಲಿದೆ. ಬಳ್ಳಾರಿಯ ಸುಧಾ ಸರ್ಕಲ್, ರೇಡಿಯೋಪಾರ್ಕ್, ಟ್ರಾಮಾಕೇರ್, ಸೂಪರ್ ಸ್ಪೆಷಾಲಿಟಿ, ಅತ್ಯಾಧುನಿಕ ಆಂಬುಲೆನ್ಸ್, ಬಿಮ್ಸ್ ಆಸ್ಪತ್ರೆ, ಎಂಆರ್‌ಐ ಯಂತ್ರ ಹೀಗೇ ಅನೇಕ ಅಭಿವೃದ್ಧಿ ಕೆಲಸಗಳನ್ನು ಪ್ರಸ್ತಾಪಿಸಿದ ಸಂಸದ ಇ. ತುಕಾರಾಂ, ವೇಣಿವೀರಾಪುರ - ಹಗರಿ, ಹಗರಿಯಿಂದ ಸಿರುಗುಪ್ಪ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಿ, ಕಾಮಗಾರಿಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುತ್ತದೆ ಎಂದರು.

ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ನಾಸಿರ್ ಹುಸೇನ್, ಬಳ್ಳಾರಿ ನಗರ ಶಾಸಕ ನಾರಾ ಭರತರೆಡ್ಡಿ, ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಮುಲ್ಲಂಗಿ ನಂದೀಶ್, ಲಿಡ್ಕರ್ ಅಧ್ಯಕ್ಷ ಮುಂಡ್ರಗಿ ನಾಗರಾಜ್, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಯಶವಂತರಾಜ್ ನಾಗಿರೆಡ್ಡಿ ಅವರು ಮಾತನಾಡಿದರು.

ಬಿಡಿಸಿಸಿಐನ ಹಿರಿಯ ಉಪಾಧ್ಯಕ್ಷ ಮಂಜುನಾಥ್, ನಿಕಟಪೂರ್ವ ಅಧ್ಯಕ್ಷರಾದ ಬಿ.ಮಹಾರುದ್ರಗೌಡ, ಮಾಜಿ ಅಧ್ಯಕ್ಷರಾದ ಸಿ. ಶ್ರೀನಿವಾಸರಾವ್, ಖಜಾಂಚಿ ಪಿ.ಪಾಲಣ್ಣ ಅವರು ವೇದಿಕೆಯಲ್ಲಿದ್ದರು. ಡಾ.ಶ್ರೀನಿವಾಸರೆಡ್ಡಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಸಿ.ಸುರೇಶಬಾಬು ಅವರು ವಂದನಾರ್ಪಣೆ ಸಲ್ಲಿಸಿದರು.

ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಂಸದರು ಮತ್ತು ಶಾಸಕರ ಜೊತೆ ಮಾತನಾಡಿ, ತಮ್ಮ ಅಹವಾಲುಗಳನ್ನು ಸಲ್ಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News