×
Ad

ಕನ್ನಡದ ಬಳಕೆಗೆ ಆದ್ಯತೆ ನೀಡಿ : ಸಚಿವ ರಹೀಂ ಖಾನ್

ಬಳ್ಳಾರಿಯಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ

Update: 2025-11-01 18:26 IST

ಬಳ್ಳಾರಿ : ಪ್ರತಿಯೊಂದು ಹೆಜ್ಜೆಯಲ್ಲೂ ಕನ್ನಡದ ಅಸ್ತಿತ್ವ ಪ್ರತಿಫಲಿಸಬೇಕು. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ಕೇವಲ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಜನಸಾಮಾನ್ಯರು ಹಾಗೂ ಸಂಘ–ಸಂಸ್ಥೆಗಳ ಸಹಭಾಗಿತ್ವವೂ ಅಗತ್ಯ ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಹೇಳಿದರು.

ನಗರದ ಸರ್ಕಾರಿ (ಮಾಜಿ ಪುರಸಭೆ) ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಶನಿವಾರ ಜಿಲ್ಲಾಡಳಿತದ ವತಿಯಿಂದ ನಡೆದ 70ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಭುವನೇಶ್ವರಿ ದೇವಿಗೆ ಪುಷ್ಪನಮನ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

ಕೇವಲ ಇಂಗ್ಲೀಷ್ ಓದುವುದರಿಂದ ಮಾತ್ರ ಅಭಿವೃದ್ಧಿ ಸಿಗುವುದಿಲ್ಲ. ಚೀನಾ, ಜಪಾನ್ ಮುಂತಾದ ರಾಷ್ಟ್ರಗಳು ತಮ್ಮ ಮಾತೃಭಾಷೆಯಲ್ಲಿಯೇ ಪ್ರಗತಿ ಕಂಡಿವೆ. ಹಾಗಾಗಿ ನಮ್ಮ ಕನ್ನಡದ ಬಳಕೆ, ಗೌರವ ಮತ್ತು ಅಭಿಮಾನ ಹೆಚ್ಚಿಸಬೇಕು ಎಂದು ಕಿವಿಮಾತು ನೀಡಿದರು.

ಕರ್ನಾಟಕದ ಭಾಷೆ, ಸಂಸ್ಕೃತಿ, ವೈವಿಧ್ಯತೆ, 2,500 ವರ್ಷಗಳ ಇತಿಹಾಸ ಮತ್ತು ಬಸದೇಶ್ವರರಿಂದ ಅನೇಕ ವಚನಕಾರರ ವರದಾನಗಳನ್ನು ಉಲ್ಲೇಖಿಸಿ, ಕನ್ನಡ ಸುಲಲಿತವಾಗಿ ಬದುಕಲು ಅನುಕೂಲ ಮಾಡುವ ಭಾಷೆ ಎಂದರು.

1956ರ ನ.1ರಂದು ಕರ್ನಾಟಕ ಏಕೀಕರಣದ ಮೂಲಕ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದು, 1973ರಲ್ಲಿ ‘ಕರ್ನಾಟಕ’ ಎಂದು ಮರುನಾಮಕರಣಗೊಂಡ ಹಿನ್ನೆಲೆಯನ್ನು ಸ್ಮರಿಸಿದರು. ರಾಜ್ಯೋತ್ಸವ ಕನ್ನಡದ ಗೌರವ ದಿನವಾಗಬೇಕು, ನಾಡಿನ ಹೋರಾಟಗಾರರು ಹಾಗೂ ಸಾಧಕರನ್ನು ಗೌರವಿಸುವ ವೇದಿಕೆ ಆಗಬೇಕು ಎಂದು ಹೇಳಿದರು.

ರಾಜ್ಯ ತೆರಿಗೆ ಪಾವತಿಯಲ್ಲಿ ಕರ್ನಾಟಕ ದೇಶದಲ್ಲಿ 2ನೇ ಸ್ಥಾನದಲ್ಲಿದ್ದು, ವರ್ಷಕ್ಕೆ ಸುಮಾರು 4 ಲಕ್ಷ ಕೋಟಿ ರೂ. ತೆರಿಗೆ ರಾಜ್ಯದಿಂದ ಸಂಗ್ರಹವಾಗುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳಿಗೇ ವರ್ಷಕ್ಕೆ 60 ಸಾವಿರ ಕೋಟಿ ರೂ. ವೆಚ್ಚವಾಗುತ್ತಿದ್ದು, ಸಾಮಾನ್ಯ ಜನರ ಏಳ್ಗೆಗೆ ಸಹಕಾರಿಯಾಗಿದೆ ಎಂದು ವಿವರಿಸಿದರು.

ತದನಂತರ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸ್ತಬ್ಧಚಿತ್ರ ಮೆರವಣಿಗೆ, ವಿವಿಧ ಯೋಜನೆಗಳ ಪ್ರದರ್ಶನ, ಕಲೆ ಮತ್ತು ಸಂಸ್ಕೃತಿ ಚಿತ್ರೀಕರಣ, ಕರ್ನಾಟಕ ಏಕೀಕರಣ ಹೋರಾಟಗಾರ ಪಿಂಜಾರ ರಂಜಾನ್ ಸಾಬ್ ಹಾಗೂ ಭುವನೇಶ್ವರಿ ದೇವಿಯ ಭಾವಚಿತ್ರದ ಜ್ಯೋತಿ ಹಸ್ತಾಂತರ, ಸಾಧಕರ ಸನ್ಮಾನ, ವಿದ್ಯಾರ್ಥಿಗಳ ಬಹುಮಾನ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು.

ಕನ್ನಡ ನಾಡು-ನುಡಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಜಿಲ್ಲಾ ಸನ್ಮಾನಿಸಿ ಗೌರವಿಸಲಾಯಿತು.

ಬರ‍್ರಕಥಾ- ಜಂಬಕ್ಕ ಎಂಡಿ ಕ್ಯಾಂಪ್(ಕಂಪ್ಲಿ), ಬಯಲಾಟ- ಚೆನ್ನದಾಸರ ಮಾರೆಪ್ಪ(ಮೆಟ್ರಿ), ಹಗಲುವೇಷ- ಕೆ.ಶಂಕ್ರಪ್ಪ(ಶ್ರೀಧರಗಡ್ಡೆ), ಕನ್ನಡ ಸೇವೆ- ಹೀಮಂತ್ ರಾಜ್ ಸಂಗನಕಲ್ಲು, ಶಿಕ್ಷಣ ಕ್ಷೇತ್ರ- ಸಿ.ಎಂ.ಶಿಗ್ಗಾವಿ ಸಂಡೂರು ಮತ್ತು ಪುರುಷೋತ್ತಮ ಬಿ.ಬಳ್ಳಾರಿ, ವೈದ್ಯಕೀಯ ಕ್ಷೇತ್ರ- ಡಾ.ಮಧುಸೂಧನ್ ಕಾರಿಗನೂರು (ಸಿರುಗುಪ್ಪ), ಸಾಹಿತ್ಯ ಕ್ಷೇತ್ರ- ಬಂಗಿ ದೊಡ್ಡ ಮಂಜುನಾಥ (ಕಂಪ್ಲಿ), ಚಿತ್ರಕಲೆ ಕ್ಷೇತ್ರ- ಮುಹಮ್ಮದ್‌ ರಫಿ ಬಳ್ಳಾರಿ, ಸಾಹಿತ್ಯ/ಸಂಘಟನೆ ಕ್ಷೇತ್ರ- ದಮ್ಮೂರು ಮಲ್ಲಿಕಾರ್ಜುನ(ಸಿರುಗುಪ್ಪ) ಪತ್ರಿಕೋದ್ಯಮ- ಕೆ.ಎನ್.ಗಂಗಾಧರ ಗೌಡ ಹಾಗೂ 70ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಶಾಲೆ ಮತ್ತು ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಬಳಿಕ ವಿವಿಧ ಕಲಾ ತಂಡಗಳ ವಾದ್ಯಗಳ ಕಲರವದೊಂದಿಗೆ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳನ್ನೊಳಗೊಂಡ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಕನ್ನಡ ಪ್ರೇಮ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಡಾ.ಬಾಬು ಜಗಜೀವನ್‌ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಮಹಾನಗರ ಪಾಲಿಕೆಯ ಮಹಾಪೌರರಾದ ಮುಲ್ಲಂಗಿ ನಂದೀಶ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕರಾದ ವರ್ತಿಕಾ ಕಟಿಯಾರ್, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ., ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೈರ್, ಬಳ್ಳಾರಿ ವಲಯ ಉಪಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್.ಬಸವರಾಜ, ಅಪರ ಜಿಲ್ಲಾಧಿಕಾರಿ ಮುಹಮ್ಮದ್ ಎನ್.ಝುಬೇರ್, ಡಿಎಂಎಫ್ ವಿಶೇಷಾಧಿಕಾರಿ ಲೋಕೇಶ್, ಸಹಾಯಕ ಆಯುಕ್ತ ಪಿ.ಪ್ರಮೋದ್, ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳು ಅಧಿಕಾರಿಗಳು, ಮಹಾನಗರ ಪಾಲಿಕೆ ಸದಸ್ಯರು, ವಿವಿಧ ಕನ್ನಡಪರ ಸಂಘಟನೆಗಳು, ಹೋರಾಟಗಾರರು, ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News