ಬೀದರ್: ರೂ. 38 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ವಶ; ಗಾಂಧಿಗಂಜ್ ಪೊಲೀಸರ ಕಾರ್ಯಾಚರಣೆ
ಬೀದರ್: ನಗರದ ಗಾಂಧಿಗಂಜ್ ಪೊಲೀಸರು ಕಾರ್ಯಾಚರಣೆ ನಡೆಸಿ ರೂ. 38 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಎಸ್ಪಿ ಪ್ರದೀಪ್ ಗುಂಟಿ ಅವರ ಮಾರ್ಗದರ್ಶನದಲ್ಲಿ ಗಾಂಧಿಗಂಜ್ ಪೊಲೀಸ್ ಠಾಣೆಯ ಪಿಎಸ್ಐ ಆನಂದರಾವ್ ಹಾಗೂ ಪೊಲೀಸ್ ಸಿಬ್ಬಂದಿಗಳು ಠಾಣಾ ವ್ಯಾಪ್ತಿಯ ಚಿದ್ರಿ ರೋಡ್ ನಲ್ಲಿರುವ ಸಂಗಮೇಶ್ವರ್ ಕಾಲೋನಿಯ ಮನೆ ಮೇಲೆ ದಾಳಿ ನಡೆಸಿ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ 38 ಲಕ್ಷ 15 ಸಾವಿರ ರೂ. ಮೌಲ್ಯದ 38 ಕೆಜಿ 150 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ಆರೋಪಿ ಮಹಿಳೆಯು ಪರಾರಿಯಾಗಿದ್ದಾಳೆ.
ತಮ್ಮ ಠಾಣಾ ವ್ಯಾಪ್ತಿಯನ್ನು ನಶಾ ಮುಕ್ತ ಮಾಡುವ ಸಂಕಲ್ಪ ಇಟ್ಟುಕೊಂಡು ಗಾಂಜಾ ದಾಳಿಯಲ್ಲಿ ಶ್ರಮಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಎಸ್ಪಿ ಪ್ರದೀಪ್ ಗುಂಟಿ ಶ್ಲಾಘಿಸಿದ್ದು, ಜಿಲ್ಲೆಯನ್ನು ಗಾಂಜಾ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲಾ ಪೊಲೀಸರ ಕಾರ್ಯಾಚರಣೆಯು ಸದಾ ಮುಂದುವರೆಯುತ್ತದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.