ಕರ್ನಾಟಕದಲ್ಲಿ ರಾಮರಾಜ್ಯ ಬರಬೇಕಾದರೆ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಬೇಕು : ನಿಖಿಲ್ ಕುಮಾರಸ್ವಾಮಿ
ಬೀದರ್ : ಕರ್ನಾಟಕದಲ್ಲಿ ರಾಮರಾಜ್ಯ ಬರಬೇಕಾದರೆ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಬೇಕು. ಇದರಿಂದಾಗಿ ಜಿಲ್ಲೆಯ ಜನರು ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.
ಇಂದು ನಗರದ ಖಾಸಗಿ ಫಂಕ್ಷನ್ ಹಾಲ್ ನಲ್ಲಿ ನಡೆದ ಜೆಡಿಎಸ್ ಪಕ್ಷದ ಸದಸ್ಯತ್ವ ಅಭಿಯಾನ ಮತ್ತು ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕಕ್ಕೆ 3 ಸಾವಿರ ಕೋಟಿ ರೂ. ಹಣ ನೀಡಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಎಲ್ಲಿದೆ ಹಣ. ಈ ರಾಜ್ಯ ಸರಕಾರದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಗ್ಯಾರಂಟಿಗಳಿಂದ ಸರ್ಕಾರ ದಿವಾಳಿಯಾಗಿದೆ. ಕಾಂಗ್ರೆಸ್ ಸರ್ಕಾರ ಇರುವ ಹಿಮಾಚಲ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲೂ ಕೂಡ ಆರ್ಥಿಕ ದಿವಾಳಿ ಎದ್ದಿದೆ. ಅಲ್ಲಿನ ಸರ್ಕಾರಗಳು ಗ್ಯಾರಂಟಿಗೆ ಹಣ ನೀಡಬೇಕೋ ಅಥವಾ ಸರ್ಕಾರ ನಡೆಸಬೇಕೋ ಎನ್ನುವ ಗೊಂದಲದಲ್ಲಿವೆ ಎಂದು ಲೇವಡಿ ಮಾಡಿದರು.
ನಾಲ್ಕುವರೆ ಲಕ್ಷ ಕೋಟಿ ರೂ. ಬಜೆಟ್ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳುತ್ತಾರೆ. ಆದರೆ ಅವರು ನಾವು ಉಸಿರಾಡುವ ಗಾಳಿಯೊಂದಕ್ಕೆ ಬಿಟ್ಟು ಎಲ್ಲದಕ್ಕೂ ತೆರಿಗೆ ಹಾಕಿ ಬೊಕ್ಕಸ ತುಂಬುತ್ತಿದ್ದಾರೆ. ಈ ಸರ್ಕಾರದವರಿಗೆ ಮನಿ ಟ್ರ್ಯಾಪ್, ಹನಿ ಟ್ರ್ಯಾಪ್ ಮತ್ತು ತೆರಿಗೆ ಟ್ರ್ಯಾಪ್ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಇಂಥಹ ಕಪ್ಪು ಚುಕ್ಕೆ ಇರುವ ಸರ್ಕಾರ ಈ ಕಾಂಗ್ರೆಸ್ ಸರ್ಕಾರವಾಗಿದೆ ಎಂದು ಹೇಳಿದರು.
ಕುಮಾರಸ್ವಾಮಿ ಅವರ ಆರೋಗ್ಯ ಸರಿಯಿಲ್ಲ. ಜನತಾ ದಳ ಪಕ್ಷಕ್ಕೆ ಭವಿಷ್ಯವಿಲ್ಲ ಎಂದು ಹೇಳಿದ್ದರು. ಆದರೆ ಕುಮಾರಸ್ವಾಮಿ ಅವರು ರೈತರ ಪ್ರೀತಿಯಿಂದ ನೂರಾರು ವರ್ಷ ಬದುಕುತ್ತಾರೆ ಎಂದರು.
ತಮ್ಮ ತಮ್ಮ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ನಲ್ಲಿ ನಮ್ಮ ಕಾರ್ಯಕರ್ತರು ಜನರ ಜೊತೆಗೆ ಸಂಪರ್ಕ ಇಟ್ಟುಕೊಳ್ಳಬೇಕು. ಆವಾಗ ಮಾತ್ರ ಅಲ್ಲಿ ಜಯಗಳಿಸಲು ಸಾಧ್ಯವಿದೆ. ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕೆಲಸ ಮಾಡಬೇಕು. ಜನರಲ್ಲಿ ಬೆರೆಯುವ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನಾಗಮಂಗಲದ ಶಾಸಕ ಸುರೇಶ್ ಗೌಡ, ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್, ಮಾಜಿ ಶಾಸಕ ಭಗವಂತ ಖುಬಾ, ಸೂರ್ಯಕಾಂತ್ ನಾಗಮಾರಪಳ್ಳಿ, ಜಿಲ್ಲಾಧ್ಯಕ್ಷ ರಮೇಶಕುಮಾರ್ ಸೋಲಪುರ್, ವಿಜಯಕುಮಾರ್, ಸಿದ್ರಾಮಪ್ಪ ವಂಕೆ, ಮಲ್ಲಿಕಾರ್ಜುನ್ ನೇಳಗೆ, ನಿಸ್ಸಾರ್ ಅಹಮ್ಮದ್ ಹಾಗೂ ಬಸವರಾಜ್ ಪಾಟೀಲ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.