×
Ad

ಕೇಂದ್ರ ಸರ್ಕಾರದ ನೂತನ ಎಟಿಪಿ ಯೋಜನೆ; ನೀವು ತಿಳಿದುಕೊಳ್ಳಲೇಬೇಕಾದ ಅಂಶಗಳಿವು...

Update: 2025-06-19 07:30 IST

ಸಾಂದರ್ಭಿಕ ಚಿತ್ರ PC: PTI

ಹೊಸದಿಲ್ಲಿ: ಸ್ವಾತಂತ್ರ್ಯ ದಿನದಂದು ವಾರ್ಷಿಕ ಟೋಲ್ ಪಾಸ್ (ಎಟಿಪಿ) ಯೋಜನೆಗೆ ಚಾಲನೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಪಾಸ್ ಹೊಂದಿರುವ ಖಾಸಗಿ ಕಾರು ಮಾಲೀಕರು ಒಂದು ವರ್ಷದ ಅವಧಿಯಲ್ಲಿ 200 ಬಾರಿ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ನಿರ್ವಹಿಸುವ ಎಕ್ಸ್ಪ್ರೆಸ್ ಹೈವೇ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಗದು ಅಥವಾ ಫಾಸ್ಟ್ಯಾಗ್ ರೂಪದಲ್ಲಿ ಹಣವನ್ನು ಪಾವತಿಸದೇ ಪ್ರಯಾಣ ಮಾಡಲು ಅವಕಾಶ ಇರುತ್ತದೆ.

ಇದು ಫಾಸ್ಟ್ಯಾಗ್ ಯೋಜನೆಗೆ ಪರ್ಯಾಯವಲ್ಲ; ಆದರೆ ಒಂದು ಬಾರಿ ನೀವು ಪಾವತಿಸಿ ಸುಲಲಿತವಾಗಿ ಪ್ರಯಾಣಿಸಲು ಅವಕಾಶವಿರುತ್ತದೆ. ಇದು ನಿಮ್ಮ ಕಾರ್ಡ್ ನಲ್ಲಿರುವ ಬ್ಯಾಲೆನ್ಸ್ ಬದಲಾಗಿ ನಿಮ್ಮ ಪ್ರಯಾಣದ ಸಂಖ್ಯೆಯ ಲೆಕ್ಕಾಚಾರವನ್ನು ಆಧರಿಸಿರುತ್ತದೆ. ಕೇವಲ ಖಾಸಗಿ ಕಾರು ಹೊಂದಿದವರು ಇದರ ಪ್ರಯೋಜನ ಪಡೆಯಬಹುದಾಗಿದ್ದು, ಟ್ಯಾಕ್ಸಿಗಳು ಅಥವಾ ಇತರ ವಾಣಿಜ್ಯ ವಾಹನಗಳಿಗೆ ಇದು ಲಭ್ಯ ಇರುವುದಿಲ್ಲ.

ಆಗಸ್ಟ್ 15ರಂದು ಎನ್ಎಚ್ಎಐ ಇದಕ್ಕೆ ಚಾಲನೆ ನೀಡಲಿದ್ದು, 3000 ರೂಪಾಯಿ ಪಾವತಿಸಿ ಕಾರ್ಡ್ ಖರೀದಿ ಮಾಡಿದ ದಿನದಿಂದ ಒಂದು ವರ್ಷದ ವರೆಗೆ ಇದು ಮಾನ್ಯವಾಗಿರುತ್ತದೆ. ಈ ಅವಧಿಯಲ್ಲಿ ಎಟಿಪಿ ಕಾರ್ಡ್ ದಾರರು ಎನ್ಎಚ್ಎಐ ಜಾಲದಲ್ಲಿ 200 ಪ್ರವಾಸ ಕೈಗೊಳ್ಳಬಹುದು. ಈ ನಿಗದಿತ ಸಂಖ್ಯೆ ಮುಗಿದಾಗ ಮತ್ತೆ ಒಂದು ವರ್ಷದ ಅವಧಿಗೆ ನವೀಕರಿಸಿಕೊಳ್ಳಬಹುದಾಗಿದೆ. ಪರ್ಯಾಯವಾಗಿ ಫಾಸ್ಟ್ಯಾಗ್ ಮೂಲಕ ಪಾವತಿಸಲೂ ಅವಕಾಶ ಇರುತ್ತದೆ. ಆದರೆ ಎಟಿಪಿ ಕಡ್ಡಾಯವಲ್ಲ. ಹಾಲಿ ಇರುವ ಫಾಸ್ಟ್ಯಾಗ್ ವ್ಯವಸ್ಥೆ ಮುಂದುವರಿಸಲು ಬಯಸುವವರಿಗೆ ಹಳೆಯ ವ್ಯವಸ್ಥೆಯೇ ಜಾರಿಯಲ್ಲಿರುತ್ತದೆ. ಎಟಿಪಿ ಕಾರ್ಡ್ ದಾರರು ಒಂದು ಟೋಲ್ ಪ್ಲಾಝಾ ದಾಟುವುದನ್ನು ಒಂದು ಟ್ರಿಪ್ ಎಂದು ಪರಿಗಣಿಸಲಾಗುತ್ತದೆ. ಅಂದರೆ ಪ್ರಯಾಣ ಆರಂಭಿಸಿ ನಾಲ್ಕು ಟೋಲ್ ಗಳನ್ನು ದಾಟಿದರೆ 4 ಟ್ರಿಪ್ ಎಂದು ಲೆಕ್ಕ ಹಾಕಲಾಗುತ್ತದೆ.

ಈ ವ್ಯವಸ್ಥೆ ಎಲ್ಲ ಮುಕ್ತ ಟೋಲಿಂಗ್ ವ್ಯವಸ್ಥೆಗಳಲ್ಲಿ ಕೆಲಸಮಾಡುತ್ತದೆ. ಇನ್ನೂ ಮುಚ್ಚಿದ ಟೋಲಿಂಗ್ ವ್ಯವಸ್ಥೆ ಹೊಂದಿರುವ ಹೆದ್ದಾರಿಗಳಿಗೆ ನಿರ್ಗಮನ ಸ್ಥಳದಲ್ಲಿ ಟೋಲ್ ಪಾವತಿಸಲಾಗುತ್ತದೆ ಹಾಗೂ ಇದನ್ನು ಒಂದು ಟ್ರಿಪ್ ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ ದೆಹಲಿ-ಮುಂಬೈ ಎಕ್ಸ್ಪ್ರೆಸ್ ಹೈವೇ, ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ ಹೈವೇಯಂಥ ಹೆದ್ದಾರಿಯಲ್ಲಿ ನೀವು ಒಂದು ನಗರದಿಂದ ಇನ್ನೊಂದು ನಗರಕ್ಕೆ ಪ್ರಯಾಣಿಸುವುದನ್ನು ಒಂದು ಟ್ರಿಪ್ ಎಂದು ಪರಿಗಣಿಸಲಾಗುತ್ತದೆ. ಆದರೆ ನೀವು ಅರ್ಧಮಾರ್ಗದಲ್ಲೇ ನಿರ್ಗಮಿಸಿದರೆ ಅಥವಾ ಮತ್ತೊಂದು ಕೇಂದ್ರದಲ್ಲಿ ಮರು ಪ್ರವೇಶ ಪಡೆದಲ್ಲಿ ಇದು ಎರಡು ಟ್ರಿಪ್ ಎಂದು ಪರಿಗಣಿಸಲ್ಪಡುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News